ಚಿಂತಾಮಣಿ-ಭಾಗೆಪಲ್ಲಿ ರಸ್ತೆ ದುರಸ್ತಿಗೆ ಆಗ್ರಹ

ಶಿಡ್ಲಘಟ್ಟ,ನ.೭: ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ತಾಲೂಕಿನ ದಿಬ್ಬೂರಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂತಾಮಣಿ ಹಿಂದ ಬಾಗೇಪಲ್ಲಿ ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೈವಾರ , ತಲಕಾಯಲಬೆಟ್ಟ ಪುಣ್ಯಕ್ಷೇತ್ರಗಳು ಹಾಗೂ ವಾಣಿಜ್ಯ ನಗರ ಚಿಂತಾಮಣಿ ಗೆ ಪ್ರತಿದಿನ ನೂರಾರು ಜನ ಪ್ರವಾಸಿಗರು ಮತ್ತು ವ್ಯಾಪಾರಸ್ಥರು ಆಗಮಿಸುತ್ತಾರೆ. ತೀವ್ರ ಹದಗೆಟ್ಟಿರುವ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ಅಡಚಣೆಯಾಗಿದೆ.
ಇದೀಗ ಮಳೆಗಾಲದ ಸಮಯದಲ್ಲಿ ಮಳೆ ನೀರೆಲ್ಲ ರಸ್ತೆ ಮೇಲೆ ಹರಿಯುವುದರಿಂದ ದುರಸ್ತಿ ಕಾಣದ ಕಿರಿದಾದ ರಸ್ತೆಯಲ್ಲಿ ಪ್ರಯಾಣಿಕರು ಪ್ರಯಾಸಪಡಬೇಕಿದೆ. ಈ ರಸ್ತೆ ಸಾದಲಿ, ದಿಬ್ಬೂರಹಳ್ಳಿ, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳಿಗೆ ಕಲ್ಪಿಸುವ ರಸ್ತೆಯಾಗಿದೆ. ಗ್ರಾಮಸ್ಥರು ಪಟ್ಟಣ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಾರ್ಯಗಳಿಗೆ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಈ ರಸ್ತೆಯಲ್ಲಿ ಬಸ್ ಸಂಚಾರ ವ್ಯವಸ್ಥೆ ಸರಿಯಾಗಿ ಇಲ್ಲ. ಖಾಸಗಿ ವಾಹನಗಳನ್ನು ಬಿಟ್ಟರೆ ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗೆ ಹೋಗಬೇಕಾಗಿದೆ ಪರದಾಡ ಬೇಕಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವವರು ಅಗತ್ಯ ಕೆಲಸಗಳಿಗೆ ಬರಬೇಕಾದರೆ ಹಾಗೂ ರೋಗಿಗಳು ತುರ್ತು ಚಿಕಿತ್ಸೆಗೆ ತೆರಳಲು ಹರಸಾಹಸ ಪಡಬೇಕಾಗಿದೆ.
ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗದಲ್ಲಿ ಪ್ರತಿನಿತ್ಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಚರಿಸುತ್ತಲೇ ಇರುತ್ತಾರೆ. ರಸ್ತೆ ಸಂಪೂರ್ಣ ಹಾನಿಗೊಂಡಿದ್ದರೂ ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಇನ್ನಾದರೂ ಈ ಭಾಗದಲ್ಲಿನ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡುವರೋ ಕಾದು ನೋಡಬೇಕಿದೆ.
ರಸ್ತೆ ಇಷ್ಟೊಂದು ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿರುವುದು ಆಶ್ಚರ್ಯ ತಂದಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರಾದ ವಿಜಯ ಭಾವರಡ್ಡಿ,ನರಸಿಂಹರಡ್ಡಿ, ಶಿವಕುಮಾರ್,ನಾಗರಾಜ ರಡ್ಡಿ,ರಾಮಚಂದ್ರ,ಮಣಿಕುಮಾರ್ ಮಂಜುನಾಥ್, ಭೈರಾರಡ್ಡಿ,ಅಶೋಕ್, ಶ್ರೀ ನಿವಾಸ್ ಮತ್ತಿತರರು ಆಗ್ರಹಿಸಿದ್ದಾರೆ.