ಸಂಜೆವಾಣಿ ವಾರ್ತೆ
ಸಂಡೂರು :ಜು: 12: ಮಹಾನ್ ಮಾಕ್ರ್ಸ್‍ವಾದಿ ಚಿಂತಕರಾದ ಕಾ.ಶಿವದಾಸ್ ಘೋಷ ಜನ್ಮ ಶತಮಾನೋತ್ಸವವನ್ನು ಪಟ್ಟಣದ ಪಿ.ಎಸ್.ಕೆ ಫಂಕ್ಷನ್ ಹಾಲ್ ನಲ್ಲಿ, ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ವತಿಯಿಂದ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಕಾಮ್ರೇಡ್ ಎಂ.ದೇವದಾಸ್ ಅವರು ಮಾತನಾಡುತ್ತಾ “ಕಾಮ್ರೇಡ್ ಶಿವದಾಸ್ ಘೋಷ, ಇದು ಕೇವಲ ಒಂದು ಹೆಸರಲ್ಲ, ಬದಲಿಗೆ ಶೋಷಿತ, ನೊಂದ ಜನರ ಮನಸ್ಸಿನಾಳದಲ್ಲಿ ಇಂದು ಪ್ರತಿಧ್ವನಿಸುತ್ತಿರುವ ಒಂದು ಮಹಾನ್ ವೈಚಾರಿಕ ಶಕ್ತಿ. ಮಾಕ್ಸ್ರ್ವಾದಿ ವಿಜ್ಞಾನವನ್ನು ಭಾರತದ ವಿಶಿಷ್ಟ ಪರಿಸ್ಥಿತಿಗೆ ಸಮರ್ಪಕವಾಗಿ ಅಳವಡಿಸಿದ ಕಾ.ಘೋಷ ಉತ್ಕೃಷ್ಟವಾದ ಚಿಂತನೆಗಳನ್ನು ನಮಗೆ ನೀಡಿದ್ದಾರೆ. ಈ ಚಿಂತನೆಗಳ ಮೂಲಕವೇ ದೇಶದ ಜನರನ್ನು ಕಾಡುತ್ತಿರುವ ಬೆಲೆ ಏರಿಕೆ, ಅಸಮಾನತೆ, ನಿರುದ್ಯೋಗ, ಬಡತನ, ಹಸಿವು ಮುಂತಾದ ಅನೇಕ ಸಮಸ್ಯೆಗಳಿಗೆ ಒಂದು ವೈಜ್ಞಾನಿಕ ಪರಿಹಾರ ನೀಡಬಹುದಾಗಿದೆ. ಅವರ ಚಿಂತನೆಗಳ ಬಲದಿಂದಲೇ ಇಂದಿನ ಭ್ರಷ್ಟ ಹಾಗೂ ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗೊಳಿಸಬಹುದಾಗಿದೆ” ಎಂದರು.
ಕಾ.ಸೋಮಶೇಖರ ಗೌಡ ಅವರು ಕೇವಲ 13 ವರ್ಷ ಪ್ರಾಯದಲ್ಲೇ ಕಾ.ಶಿವದಾಸ್ ಘೋಷ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಕ್ರಾಂತಿಕಾರಿ ಸಂಘಟನೆ ‘ಅನುಶೀಲನ್’ ಸಮಿತಿಯಲ್ಲಿ ಸಹಯೋಧರಾದ ಕಾ.ನಿಹಾರ್‍ಮುಖರ್ಜಿ ಅವರೊಂದಿಗೆ ಜೊತೆಗೂಡಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದರು. ದುಡಿಯುವ ವರ್ಗ ಅಧಿಕಾರದ ಚುಕ್ಕಾಣಿ ಹಿಡಿದು, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲಾ ರೀತಿಯ ಅಸಮಾನತೆಗಳು ಸಂಪೂರ್ಣವಾಗಿ ತೊಲಗಬೇಕಾದರೆ, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಬೇಕು ಎಂಬ ಸತ್ಯವನ್ನು ಕಾ.ಶಿವದಾಸ್ ಘೋಷಅವರು ಮನಗಂಡರು. ಅದಕ್ಕಾಗಿ ಜೈಲಿನಲ್ಲಿದ್ದಾಗಲೇ ಒಂದು ನೈಜ ಕಮ್ಯುನಿಸ್ಟ್ ಪಕ್ಷ ಕಟ್ಟುವ ತ್ರಾಸದಾಯಕ ಹೋರಾಟವನ್ನು ಆರಂಭಿಸಿದರು ಏಪ್ರಿಲ್ 24, 1948 ರಂದು ಕಾ.ಶಿವದಾಸ್ ಘೋಷ ಅವರು ಬೆರಳೆಣಿಕೆಯ ಸಹಯೋಧರೊಂದಿಗೆ ಸೇರಿ ಈ ನೆಲದ ನೈಜ ಕಮ್ಯುನಿಸ್ಟ್ ಪಕ್ಷ ಎಸ್.ಯು.ಸಿ.ಐ ಅನ್ನು ಸ್ಥಾಪಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಎಸ್.ಯು.ಸಿ.ಐ. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಪ್ರಮೋದ್.ಎನ್ ಅವರು ಮಾತನಾಡುತ್ತಾ “ಇಂದು ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಎಲ್ಲಾ ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ. ಮತ್ತೊಂದೆಡೆ ಕೋವಿಡ್ ಸಂದರ್ಭದಲ್ಲೂ ಅಂಬಾನಿ, ಅದಾನಿ ಸೇರಿದಂತೆ ಬೆರಳೆಣಿಕೆಯ ಮಾಲೀಕರು ನೂರಾರುಪಟ್ಟು ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಕಾರ್ಪೋರೇಟ್ ಮಾಲೀಕರ ಕೈಗೊಂಬೆಗಳಾಗಿವೆ ಎಂದರು. ಕಾಮ್ರೇಡ್ ಶಿವದಾಸ್ ಘೋಷ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಯೋಗ್ಯ ರೀತಿಯಲ್ಲಿ ಆಚರಿಸುತ್ತಾ, ಅವರ ಜೀವನ ಹೋರಾಟವನ್ನು, ವಿಚಾರಗಳನ್ನು ದೇಶದ ಮೂಲೆ ಮೂಲೆಯಲ್ಲಿ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಐತಿಹಾಸಿಕ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಸುರೇಶ್, ಖಾಸಿಂ ಪೀರ, ಬೆಂಬಲಿಗರು ಹಿತೈಷಿಗಳು ಪಾಲ್ಗೊಂಡಿದ್ದರು.
One attachment • Scanned by Gmail