ಚಿಂಚೋಳಿ ನಿಲ್ದಾಣದಿಂದ ನಾಪತ್ತೆಯಾಗಿದ್ದ ಬಸ್ ತಾಂಡೂರಿನ ಭೂಕೈಲಾಸದಲ್ಲಿ ಪತ್ತೆ

ಕಲಬುರಗಿ.ಫೆ.21:ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‍ನ್ನು ಮಂಗಳವಾರ ಬೆಳಗಿನ ಜಾವ ಅಪರಿಚತರು ಚಲಾಯಿಸಿಕೊಂಡು ಹೋಗಿದ್ದು, ತಕ್ಷಣವೇ ಪೋಲಿಸರು ಕಾರ್ಯಾಚರಣೆ ಪ್ರಾರಂಭಿಸಿ ಸಂಜೆ 4-30ರ ವೇಳೆಗೆ ತೆಲಂಗಾಣ್ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ತಾಂಡೂರಿನ ಭೂಕೈಲಾಸದಲ್ಲಿ ಮಧ್ಯಾಹ್ನ 3-30 ಪತ್ತೆ ಹಚ್ಚಿದ್ದಾರೆ.
ಪೋಲಿಸರು ಅಲ್ಲಿಗೆ ಹೋದಾಗ ಬಸ್ ಅಷ್ಟೇ ಇತ್ತು. ಆರೋಪಿಗಳು ಸಿಕ್ಕಿಲ್ಲ. ಪಿಎಸ್‍ಐ ಮಹಿಬೂಬ್ ಅಲಿ, ಪೇದೆ ಮರಲಿಂಗ್ ಅವರು ಬಸ್‍ನ್ನು ಕೇವಲ 12 ತಾಸುಗಳಲ್ಲಿ ಪತ್ತೆ ಹಚ್ಚಿದರು. ಯಾವ ಕಾರಣಕ್ಕೆ ಬಸ್‍ನ್ನು ಚಲಾಯಿಸಿಕೊಂಡು ಹೋಗಿ ಅಲ್ಲಿ ಬಿಟ್ಟು ಹೋಗಿರುವ ಕುರಿತು ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಬೀದರ್ ವಿಭಾಗದ ಬಸ್ ಘಟಕ-2ರ ಬಸ್ ಚಾಲಕ ಹಾಗೂ ಗಾದಗಿ ಗ್ರಾಮದ ನಿವಾಸಿ ಮೊಹ್ಮದ್ ಅಯೂಬ್ ತಂದೆ ಮಹೆಬೂಬ್ ಸಾಬ್ ಮಚಕುರೆ ಅವರು ಸ್ಥಳೀಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಿ, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‍ನ್ನು ಮಂಗಳವಾರ ಬೆಳಗಿನ ಜಾವ 3-37ಕ್ಕೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದರು.
ನಾನು ಸೋಮವಾರ ಘಟಕಕ್ಕೆ ಹತ್ತು ಗಂಟೆಗೆ ಬಂದಿದ್ದು, ನನಗೆ ಮತ್ತು ನನ್ನ ನಿರ್ವಾಹಕ ಈರಪ್ಪ ಇಬ್ಬರು ಸೇರಿ ಬೆಳಿಗ್ಗೆ 11 ಗಂಟೆಗೆ ಡಿಪೋದಿಂದ ವಾಹನವನ್ನು ಚಲಾಯಿಸಿಕೊಂಡು ಮನ್ನಾಎಖ್ಖೆಳ್ಳಿ, ಚಿಂಚೋಳಿಗೆ ಬಂದು ಮರಳಿ ಮನ್ನಾಎಖ್ಖೆಳ್ಳಿಗೆ ಹೋಗಿ, ಮನ್ನಾಎಖ್ಖೆಳ್ಳಿಯಿಂದ ಮರಳಿ ಚಿಂಚೋಳಿಗೆ ಬಂದು ಬಸ್‍ನ್ನು ಪ್ಲಾಟ್ ಫಾರ್ಮ್ ನಂಬರ್ 3ರಲ್ಲಿ ವಸತಿಗಾಗಿ ನಿಲ್ಲಿಸಿದೆವು. ಬಸ್ ಬಾಗಿಲು, ಕಿಟಕಿ ಎಲ್ಲವನ್ನೂ ಲಾಕ್ ಮಾಡಿ ಊಟ ಮಾಡಿಕೊಂಡು 11-30ಕ್ಕೆ ವಿಶ್ರಾಂತಿ ಕೋಣೆಯಲ್ಲಿ ಇಬ್ಬರು ಮಲಗಿದ್ದೆವು. ಮರುದಿನ ಬೆಳಗಿನ ಜಾವ ಐದು ಗಂಟೆಗೆ ಎದ್ದು ನೋಡಿದಾಗ ಬಸ್ ನಿಲ್ದಾಣದಲ್ಲಿ ಕಾಣಲಿಲ್ಲ. ಎಲ್ಲ ಕಡೆಗೆ ಹುಡುಕಾಡಿದರೂ ಸಹ ಸಿಗಲಿಲ್ಲ. ಬಸ್ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬೆಳಗಿನ ಜಾವ 3-37ಕ್ಕೆ ಅಪರಿಚತರೊಬ್ಬರು ಬಸ್‍ನ್ನು ಚಲಾಯಿಸಿಕೊಂಡು ಹೋಗಿರುವುದು ತಿಳಿದುಬಂದಿದೆ. ಬಸ್‍ನ ಅಂದಾಜು ಮೊತ್ತ 10ರಿಂದ 12 ಲಕ್ಷ ರೂ.ಗಳಾಗಿದೆ. ಬಸ್ ಹಾಗೂ ಕಳ್ಳರನ್ನು ಪತ್ತೆ ಮಾಡಿಕೊಡಬೇಕು ಎಂದು ಅವರು ದೂರಿನಲ್ಲಿ ಕೋರಿದ್ದರು.
ಎರಡು ತಂಡಗಳು ಕಾರ್ಯಾಚರಣೆ: ದೂರು ಸ್ವೀಕರಿಸಿದ ಪೋಲಿಸರು ಎರಡು ತಂಡಗಳಲ್ಲಿ ಬಸ್‍ನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದರು. ಸಿಸಿ ಟಿವಿ ಕ್ಯಾಮೆರಾದ ಸುಳಿವು ಮೂಲಕ ಪೋಲಿಸರ ತಂಡವು ತೆಲಂಗಾಣಕ್ಕೆ ತೆರಳಿತು. ರಾತ್ರಿ ಗಸ್ತಿನಲ್ಲಿದ್ದ ಪೋಲಿಸರ ಮುಂದೆಯೇ ಕಳ್ಳರು ಬಸ್‍ನ್ನು 50 ವೇಗದಲ್ಲಿ ಹೋಗಿದ್ದಾರೆ. ಅದನ್ನು ಗಮನಿಸಿದ ಪೋಲಿಸರು ಅನುಮಾನ ವ್ಯಕ್ತಪಡಿಸಿದರು. ಆದಾಗ್ಯೂ, ಅದು ಸರ್ಕಾರಿ ಬಸ್ ಎಂಬ ಕಾರಣಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಕಾಣೆಯಾದ ಬಸ್ ತೆಲಂಗಾಣದ ಮೆಹಬೂಬ್ ನಗರದ ಬಳಿ ಹೋಗಿರುವ ಮಾಹಿತಿಯೂ ಸಹ ಸಿಕ್ಕತು. ಹೀಗಾಗಿ ಬೀದರ್ ವಿಭಾಗದ ಎರಡು ತಂಡ ಹಾಗೂ ಕಲಬುರ್ಗಿ ವಿಭಾಗದ ಎರಡು ತಂಡ ಬಸ್ ಬೆನ್ನುಹತ್ತಿದರು. ಪೋಲಿಸರು ಕೂಡ ಬಸ್ ಹೋಗಿರುವ ಮಾಹಿತಿ ಪಡೆದು ಅದರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು. ಕೊನೆಗೂ ಸ್ಥಳೀಯ ಪೋಲಿಸರು ಕಾರ್ಯಾಚರಣೆ ಕೈಗೊಂಡು 12 ತಾಸುಗಳಲ್ಲಿ ಕಳುವಾದ ಬಸ್‍ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ರಾಚಪ್ಪ ಹೇಳಿಕೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರು ಈ ಕುರಿತು ಪ್ರತಿಕ್ರಿಯಿಸಿ, ಬೆಳಗಿನ ಜಾವ ಅಪರಿಚಿತ ನಕಲಿ ಕೀ ಬಳಸಿ ಬಸ್‍ನ್ನು 60 ವೇಗದಲ್ಲಿ ಚಲಾಯಿಸಿಕೊಂಡು ಹೋಗಿರುವ ಕುರಿತು ಮಾಹಿತಿ ಇದೆ. ಬಸ್‍ನಲ್ಲಿ ಯಾರೂ ಇರಲಿಲ್ಲ. ಬಸ್ ತೆಲಂಗಾಣ್ ಹಾಗೂ ಮಹೆಬೂಬ್ ನಗರದ ಕಡೆಗೆ ಹೋಗಿರುವ ಮಾಹಿತಿ ಸಿಕ್ಕಿದೆ. ಕಲಬುರ್ಗಿ ಹಾಗೂ ಬೀದರ್ ವಿಭಾಗದ ತಲಾ ಎರಡು ತಂಡಗಳೂ ಸೇರಿ ಒಟ್ಟು ನಾಲ್ಕು ತಂಡಗಳು ಪತ್ತೆ ಕಾರ್ಯದಲ್ಲಿ ತೊಡಗಿವೆ. ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಡಿವೈಎಸ್‍ಪಿ ಅವರೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದರು.
ಬಸ್ ಚಾಲಕ ಮತ್ತು ನಿರ್ವಾಹಕರಿಬ್ಬರು ರಾತ್ರಿ ಗಾಳಿಯಿರದೇ ಇರುವುದರಿಂದ ಬಸ್‍ನಲ್ಲಿ ಮಲಗುವ ಬದಲು ನಿಲ್ದಾಣದಲ್ಲಿನ ವಿಶ್ರಾಂತಿ ಕೋಣೆಯಲ್ಲಿ ಮಲಗಿದ್ದಾರೆ. ಅವರು ಬಸ್‍ನ್ನು ಡಿಪೋದಲ್ಲಿ ನಿಲ್ಲಿಸಬೇಕಿತ್ತು. ಬಹುತೇಕ ಬಸ್‍ಗಳನ್ನು ರಾತ್ರಿ ಡಿಪೋದಲ್ಲಿ ನಿಲ್ಲಿಸುತ್ತಾರೆ. ಇದೇ ಪ್ರಥಮ ಬಾರಿಗೆ ಬಸ್‍ನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಬಸ್‍ನ್ನು ಯಾವ ಕಾರಣಕ್ಕೆ ತೆಗೆದುಕೊಂಡು ಹೋಗಿರುವ ಕುರಿತು ಪರಿಶೀಲನೆ ಆರಂಭಗೊಂಡಿದೆ. ನಮ್ಮವರೇ ಏನಾದರೂ ಇಂತಹ ಕೃತ್ಯ ಮಾಡಿರಬಹುದು ಎಂಬ ಅನುಮಾನವಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಬಸ್ ಡಿಪೋದಲ್ಲಿ ಮಾತ್ರ ಭದ್ರತಾ ವ್ಯವಸ್ಥೆ ಇರುತ್ತದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಇರುವುದರಿಂದ ಭದ್ರತಾ ವ್ಯವಸ್ಥೆ ಇರುವುದಿಲ್ಲ. ಸಿಸಿ ಟಿವಿ ಕ್ಯಾಮೆರಾಗಳು ಮಾತ್ರ ಇರುತ್ತವೆ ಎಂದು ಅವರು ಸ್ಪಷ್ಟಪಡಿಸಿದರು. ಇಲ್ಲಿಯವರೆಗೆ ಮನೆ, ಅಂಗಡಿ, ಆಟೋ, ದ್ವಿಚಕ್ರವಾಹನ, ಕಾರು, ಲಾರಿ ಸೇರಿದಂತೆ ವಿವಿಧ ವಾಹನಗಳನ್ನು ಹಾಗೂ ಚಿನ್ನಾಭರಣಗಳನ್ನು ಕಳ್ಳತ ಮಾಡಿರುವುದನ್ನು ಕೇಳಿದ್ದ ಸಾರ್ವಜನಿಕರು ಸರ್ಕಾರದ ಬಸ್‍ನ್ನೇ ಕದ್ದೊಯ್ದಿರುವ ಪ್ರಕರಣವು ಅಚ್ಚರಿಯನ್ನು ಹುಟ್ಟಿಸಿತ್ತು. ಆದಾಗ್ಯೂ, ಬಸ್ ಪತ್ತೆಯಾಗಿದ್ದು, ಕಳ್ಳ ಮಾತ್ರ ಇನ್ನೂ ನಾಪತ್ತೆಯಾಗಿದ್ದಾನೆ. ಆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.