ಚಿಂಚೋಳಿ ತಾಲ್ಲೂಕಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಭೇಟಿ: ಕಿರಿಯ ಅಭಿಯಂತರ, ಮುಖ್ಯ ಗುರು, ಪ್ರಭಾರಿ ಪಿಡಿಒ ಅಮಾನತ್ತು

ಕಲಬುರಗಿ,ಜು.21:ಚಿಂಚೋಳಿ ತಾಲ್ಲೂಕಿನಲ್ಲಿ ವಿವಿಧೆಡೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿದ್ದು, ಅನೇಕ ರೀತಿಯ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಓರ್ವ ಕಿರಿಯ ಅಭಿಯಂತರ, ಮುಖ್ಯ ಗುರು ಹಾಗೂ ಪ್ರಭಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತಿಗೆ ಒಳಪಡಿಸಿದ್ದಾರೆ. ಅಲ್ಲದೇ ಸರಿಯಾಗಿ ಆಹಾರ ವಿತರಣೆ ಮಾಡದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ವಿರುದ್ದ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ತಾಲ್ಲೂಕಿನ ಸುಲೇಪೇಟ್ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ:01ಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ, ಕೇಂದ್ರದಲ್ಲಿ ಕೇವಲ ಇಬ್ಬರು ಮಕ್ಕಳು ಮಾತ್ರ ಹಾಜರಿದ್ದು, ಪೌಷ್ಠಿಕ ಆಹಾರಗಳ ದಾಸ್ತಾನು ಕಂಡುಬಂದಿರುವುದಿಲ್ಲ. ದಾಸ್ತಾನು ವಹಿ ಸರಿಯಾಗಿ ನಿರ್ವಹಣೆ ಮಾಡಿರುವುದಿಲ್ಲ. ಮಧ್ಯಾಹ್ನ12.30ನಿಮಿಷ ಆಗಿದ್ದರೂ ಸಹ ಆಹಾರ ತಯಾರಿಕೆ ಮಾಡಿರುವುದಿಲ್ಲ. ಈ ಬಗ್ಗೆ ಅಂಗವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಅವರನ್ನು ವಿಚಾರಿಸಿದಾಗ ಸರಿಯಗಿ ವಿವರಣೆ ನೀಡಿರುವುದಿಲ್ಲ. ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರು ಮಕ್ಕಳಿಗೆ ಮತ್ತು ಗರ್ಭಿಣೆಯರಿಗೆ ಪೌಷ್ಠಿಕ ಆಹಾರ ಮೊಟ್ಟೆ ಸರಿಯಾಗಿ ವಿತರಣೆ ಮಾಡುತ್ತಿಲ್ಲವೆಂದು ದೂರಿದರು. ಭೇಟಿ ಸಂದರ್ಭದಲ್ಲಿ ಜೊತೆಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಸದರಿ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲು ಸೂಚಿಸಲಾಯಿತು. ಸಂಬಂಧಪಟ್ಟ ಮೇಲ್ವಿಚಾರಕಿಗೆ ನೋಟಿಸ್ ಜಾರಿ ಮಾಡಿದರು.
ನಂತರ ಕೆಹೆಚ್‍ಪಿಟಿ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿ ಅಪೌಷ್ಠಿಕ ಮಕ್ಕಳಿಗೆ ಮತ್ತು ಕಿಶೋರಿಯರಿಗೆ ನೀಡಲು ಶಕ್ತಿ ವೀಟಾ ಪೌಡರ ತಯಾರಿಸುತ್ತಿದ್ದು ಕಂಡುಬಂದಿದ್ದು, ಘಟಕದಲ್ಲಿ ಒಳ್ಳೆಯ ಗುಣಮಟ್ಟದ ಪೌಡರ ತಯಾರಿಸುತ್ತಿದ್ದಿದ್ದು ಕಂಡುಬಂತು. ನಂತರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಸದರಿ ಪೌಡರ್ ವಿತರಣೆ ಮಾಡಿ ಅದರ ಸಾಧಕ ಬಾದಕಗಳ ಕುರಿತು ಸಂವಾದ ಮಾಡಲಾಯಿತು. ಸಂವಾದದಲ್ಲಿ ಅಪೌಷ್ಠಿಕ ಮಕ್ಕಳಿಗೆ ಹಾಗೂ ಕಿಶೋರಿಯರಿಗೆ ಈ ಪೌಡರದಿಂದ ಹೆಚ್ಚು ಉಪಯೋಗವಾಗಿದೆ ಎಂದು ತಿಳಿಸಿದರು.
ನಂತರ ಚಂದ್ರಂಪಳ್ಳಿ ಗ್ರಾಮದಲ್ಲಿ ಜೆಜೆಎಮ್ ಯೋಜನೆ ಅಡಿ ಪೈಪ್‍ಲೈನ್ ಕಾಮಗಾರಿ ಪರಿಶೀಲನೆ ಮಾಡಲಾಗಿ, ಸದರಿ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದಾಗಿದ್ದು, ಅದಕ್ಕೆ ಸಂಬಂಧಪಟ್ಟ ಆರ್‍ಡಬ್ಲ್ಯುಎಸ್ ಇಲಾಖೆಯ ಕಿರಿಯ ಅಭಿಯಂತರರ ಕರ್ತವ್ಯ ನಿರ್ಲಕ್ಷತ ಹಾಗೂ ಸರ್ಕಾರ ನಿಗದಿಪಡಿಸಿ ಅಂದಾಜು ಪಟ್ಟಿಯಂತೆ ಕಾಮಗಾರಿ ತೆಗೆದುಕೊಳ್ಳುವಲ್ಲಿ ನಿರ್ಲಕ್ಷತ ವಹಿಸಿರುವುದು ಕಂಡುಬಂದಿರುವುದಿರಂದ ಅವರನ್ನು ಅಮಾನತ್ತು ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದರು.
ನಂತರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಲಾಗಿ, ಮಕ್ಕಳ ಹಾಗೂ ಶಿಕ್ಷಕರ ಜೊತೆ ಚರ್ಚಿಸಲಾಗಿ, ಎರಡು ತಿಂಗಳಿನಿಂದ ಮೊಟ್ಟೆ ವಿತರಣೆ ಮಾಡಿರುವುದಿಲ್ಲ ಎಂದು ತಿಳಿಸಿದರು. ಶಾಲೆಯಲ್ಲಿ ಗಣಕಯಂತ್ರಗಳ ನಿರ್ವಹಣೆ ಇಲ್ಲದೆ ಉಪಯೋಗ ಮಾಡದೇ ಇರುವುದು ಕಂಡುಬಂತು. ಭೇಟಿ ಸಂದರ್ಭದಲ್ಲಿ ಮುಖ್ಯ ಗುರುಗಳು ಗೈರು ಹಾಜರಾಗಿದ್ದು, ಅವರ ಕರ್ತವ್ಯ ನಿರ್ಲಕ್ಷತನ ಹಾಗೂ ಸರ್ಕಾರದ ಮಹಾಂತ್ವಕಾಂಕ್ಷಿ ಯೋಜನೆ, ಅಪೌಷ್ಠಿಕತೆ ನಿವಾರಣೆಗಾಗಿ ಮೊಟ್ಟೆ ವಿತರಣೆ ಕಾರ್ಯಕ್ರಮ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುವುದರಿಂದ ಅವರನ್ನು ಅಮಾನತ್ತು ಮಾಡಿದರು.
ಕೊಂಚಾವರಂ ಗ್ರಾಮ ಪಂಚಾಯಿತಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ, ಸಾರ್ವಜನಿಕರೊಂದಿಗೆ ಚರ್ಚೆ ಮಾಡಿದರು. ಸದಸ್ಯರು ಹಾಗೂ ಸಾರ್ವಜನಿಕರು ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ದೂರಿದ್ದು, ಪ್ರಭಾರಿ ಪಿಡಿಓ ಅವರು ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ. ಇಲಾಖೆಯ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ವಿಫಲರಾಗಿದ್ದು, ಮಧ್ಯಪಾನ ಮಾಡಿ ಕರ್ತವ್ಯಕ್ಕೆ ಬರುವುದು ಹಾಗೂ ಒಬ್ಬ ಮಹಿಳಾ ಸಿಬ್ಬಂದಿ ತನ್ನ ಜೊತೆ ಪಿಡಿಓ ಅವರು ಅಸಭ್ಯವಾಗಿ ವರ್ತಿಸಿರುತ್ತಾರೆಂದು ದೂರಿದ್ದು, ಈ ರೀತಿಯಾಗಿ ಸಾಕಷ್ಟು ದೂರುಗಳು ಸದರಿ ಪಿಡಿಓ ರವರ ವಿರುದ್ಧ ಕೇಳಿಬಂದಿರುವುದರಿಂದ ಅವರನ್ನು ಅಮಾನತ್ತು ಮಾಡಿದರು.
ಶಾದಿಪೂರ್ ಗ್ರಾಮದ ಅಮೃತ ಕೆರೆ ವೀಕ್ಷಣೆ ಮಾಡಲಾಯಿತು. ಭೇಟಿ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಣೆ ಮಾಡಲು ಅಧಿಕಾರಿಗಳು ತಿಳಿಸಿದರು. ನಂತರ ಅರಣ್ಯ ಪ್ರದೇಶದ ಮದ್ಯದಲ್ಲಿರುವ ಸೇರಿ ಬಿಜನಳ್ಳಿ ತಾಂಡಾಕ್ಕೆ ಭೇಟಿ ನೀಡಿ ಅಲ್ಲಿದ್ದ ಗ್ರಾಮಸ್ಥರ ಜೊತೆ ಅವರ ಸಮಸ್ಯೆಗಳನ್ನು ಆಲಿಸಿದರು. ತಾಂಡಾಕ್ಕೆ ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಎರಡರಿಂದ ಮೂರು ಸೇತುವೆಗಳಿದ್ದು, ಸದರಿ ಸೇತುವೆಗಳು ತುಂಬಾ ಹಾಳಾಗಿದ್ದು, ಸಂಚಾರ ಮಾಡಲು ತುಂಬಾ ಅನಾನುಕೂಲವಾಗುತ್ತಿದ್ದು, ತಾಂಡಾದ ಜನರಿಗೆ ಆರೋಗ್ಯ ಸಮಸ್ಯೆ ಆದಾಗ ವಾಹನಗಳು ಬರುವುದಿಲ್ಲ. ಬೇರೆಕಡೆ ಕರೆದುಕೊಂಡು ಹೋಗಲು ರಸ್ತೆ ಸರಿಯಿಲ್ಲದೇ ಇರುವುದರಿಂದ ಜೋಳಿಗೆ ಮೇಲೆ (ಎತ್ತಿಕೊಂಡು) ಹೋಗುವುದಾಗಿ ತಿಳಿಸಿದರು.
ಗರ್ಭಿಣೆ ಮಹಿಳೆಯರಿಗೆ ಕೂಡಾ ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ಅದಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸದರಿ ಗ್ರಾಮವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಸರ್ಕಾರ ನಿಗದಿಪಡಿಸಿದ ಸೌಲಭ್ಯಗಳ ಬಗ್ಗೆ ತಿಳಿಹೇಳಿದರು. ಶೀಘ್ರದಲ್ಲಿ ಸದರಿ ತಾಂಡಾವನ್ನು ಬೇರೆ ಕಡೆ ಸ್ಥಳಾಂತರ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ತಿಳಿಸಿದರು. ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರು ಒಂದು ವಾರದಿಂದ ಸೋಲಾರ ಕರೆಂಟ ಇರುವುದಿಲ್ಲವೆಂದು ತಿಳಿಸಿದ್ದು, ಕೂಡಲೇ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸಲು ಕೋರಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಿಆರ್‍ಇಡಿ ಮತ್ತು ಆರ್‍ಡಬ್ಲ್ಯುಎಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.