ಚಿಂಚೋಳಿ “ಜನತಾ ದರ್ಶನ” ಕಾರ್ಯಕ್ರಮ:800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ,250 ಸ್ಥಳದಲ್ಲಿಯೇ ವಿಲೇವಾರಿ

ಕಲಬುರಗಿ,ಸೆ.25: ಸೋಮವಾರ ಚಿಂಚೋಳಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಕೆಯ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಂದಾಜು 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಆಧಾರ್ ಸಂಬಂಧಿತ 250ಕ್ಕೂ ಹೆಚ್ಚು ಅರ್ಜಿ ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. ಉಳಿದಂತೆ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗುತ್ತದೆ. 2-3 ದಿನದಲ್ಲಿ ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ, ಜೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

790 ಜನರಿಗೆ ಸರ್ಕಾರಿ ಸೌಲಭ್ಯ ವಿತರಣೆ:ಸಾರ್ವಜನಿಕರ ಸಮಸ್ಯೆ ಆಲಿಕೆಗೆ ವೇದಿಕೆಯಾಗಿದ್ದ ಜನತಾ ದರ್ಶನ ಕಾರ್ಯಕ್ರಮ 790 ಜನ ಫಲಾನುಭವಿಗಳಿಗೆ ವಿವಿಧ ಸರ್ಕಾರಿ ಸೌಲಭ್ಯ ವಿತರಣೆಗೂ ಸಾಕ್ಷಿಯಾಯಿತು.

ತಾಲೂಕು ಪಂಚಾಯತಿಯ ಎನ್.ಆರ್.ಎಲ್.ಎಂ. ಯೋಜನೆಯಡಿ ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಸಾಲ ನೀಡಲು ಪ್ರತಿ ಸಂಘಕ್ಕೆ 1.50 ಲಕ್ಷ ರೂ. ಗಳಂತೆ ಒಟ್ಟು 7.50 ಲಕ್ಷ ಸುತ್ತು ನಿಧಿ ಚೆಕ್ ಸಚಿವರು ಸೇರಿದಂತೆ ಗಣ್ಯರು ವಿತರಣೆ ಮಾಡಿದರು. ಇದಲ್ಲದೆ ತಾಲೂಕ ಪಂಚಾಯತಿಯಿಂದ ಪಿ.ಎಂ.ಅವಾಸ್, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ 299 ಜನರಿಗೆ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ, 85 ಹೊಸ ಕೂಲಿ ಕಾರ್ಮಿಕರಿಗೆ ನರೇಗಾ ಜಾಬ್ ಕಾರ್ಡ್ ವಿತರಣೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 117 ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಕಾರ್ಯಾದೇಶ ನೀಡಲಾಯಿತು.

ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವಿಶೇಷಚೇತನ ವೇತನದಡಿ 123 ಜನರಿಗೆ ಮಂಜೂರಾತಿ ಪತ್ರ, ಕೃಷಿ ಇಲಾಖೆಯಿಂದ 45 ಜನ ರೈತರಿಗೆ ಜೋಳ, ಕಡಲೆ ಬೇಳೆ ವಿತರಣೆ, ಪಶುಸಂಗೋಪನೆ ಇಲಾಖೆಯಿಂದ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಪಶುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ತರಬೇತಿ ಪಡೆದ ಚಿಂಚೋಳಿ ತಾಲೂಕಿನ 6 ಜನ ಮಹಿಳೆಯರಿಗೆ ಪಶು ಸಖಿ ಕಿಟ್ ವಿತರಣೆ ಸಹ ಮಾಡಲಾಯಿತು.

ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 10 ಜನ ಫಲಾನುಭವಿಗಳಿಗೆ ಈರುಳ್ಳಿ ಶೇಖರಣೆ ಘಟಕ ಸ್ಥಾಪನೆಗೆ ಘಟಕದ ಒಟ್ಟು ವೆಚ್ಚದ ಶೇ.50 ರಂತೆ ಪ್ರತಿಯೊಬ್ಬರಿಗೆ 87,500 ರೂ. ಸಹಾಯಧನದ ಕಾರ್ಯಾದೇಶ ವಿತರಣೆ, ಚಿಂಚೋಳಿ ಪುರಸಭೆಯಿಂದ 10 ಜನ ಪೌಕಾರ್ಮಿಕರಿಗೆ ಆರೋಗ್ಯ ವಿಮೆ ಮಂಜೂರಾತಿ ಪತ್ರ ಮತ್ತು ಸ್ಲಂ ಬೋಡ್‍ನಿಂದ 10 ಜನರಿಗೆ ಮನೆಗಳ ಹಕ್ಕು ಪತ್ರ ವಿತರಣೆ, ಕಾರ್ಮಿಕ ಇಲಾಖೆಯಿಂದ ಹೆರಿಗೆ ವೆಚ್ಚವಾಗಿ ಮೂವರು ಕಾರ್ಮಿಕ ಮಹಿಳೆಯರಿಗೆ ತಲಾ 50 ಸಾವಿರ ರೂ. ಹೆರಿಗೆ ಬಾಂಡ್ ವಿತರಣೆ, 5 ಜನರಿಗೆ ಇ-ಶ್ರಮ ಕಾರ್ಡ್ ವಿತರಣೆ, ಸಿ.ಡಿ.ಪಿ.ಓ ಕಚೇರಿಯಿಂದ 20 ಜನರಿಗೆ ಸುಕನ್ಯಾ ಸಮೃಧ್ಧಿ ಯೋಜನೆಯಡಿ ಪಾಸ್ ಬುಕ್ ವಿತರಣೆ, ಭೂಮಾಪನಾ ಇಲಾಖೆಯಿಂದ 52 ಜನರಿಗೆ ಉಚಿತ ಪಹಣಿ, ಸ್ಕೆಚ್ ಮ್ಯಾಪ್ ವಿತರಣೆ ಸಹ ಮಾಡಲಾಯಿತು.

ಆರೋಗ್ಯ ಮೇಳದಲ್ಲಿ 895 ಜನರ ತಪಾಸಣೆ:ಜನತಾ ದರ್ಶನ ಕಾರ್ಯಕ್ರಮ ಅಂಗವಾಗಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಉಚಿತ ತಪಾಸಣೆ ಶಿಬಿರದಲ್ಲಿ 485 ಜನ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣೆ ಮಾಡಿಕೊಂಡರು. 165 ಜನ ಹೆಲ್ತ್ ಎ.ಟಿ.ಎಂ. ಮೂಲಕ ಪರೀಕ್ಷಿಸಿಕೊಂಡರೆ, 245 ಜನ ದಂತ ತಪಾಸಣೆಗೆ ಒಳಗಾದರು. ಒಟ್ಟಾರೆ 895 ಜನ ಶಿಬಿರದಲ್ಲಿ ಆರೋಗ್ಯ ತಪಾಸಣೆಯ ಲಾಭ ಪಡೆದರು. ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ಪಡೆಯಲು 245 ಜನ ಹೊಸದಾಗಿ ನೋಂದಣಿ ಮಾಡಿಕೊಂಡರು.

ಊಟದ ವ್ಯವಸ್ಥೆ:ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಸುಮಾರು 15 ಕೌಂಟರ್ ಇದಕ್ಕಾಗಿ ತೆರೆಯಲಾಗಿತ್ತು. ಕಾರ್ಯಕ್ರಮಯುದ್ದಕ್ಕೂ ನೂಕುನುಗ್ಗಲು ತಡೆಯಲು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.