ಚಿಂಚೋಳಿ ಕಸಾಪ ಭಿನ್ನಮತ: ವಿವಿಧ ಸ್ಥಾನಗಳಿಗೆ ರಾಜಿನಾಮೆ

ಚಿಂಚೋಳಿ,ಫೆ.27- ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಶಿಕ್ಷಕ ವೀರಣ್ಣಾ ಸುಗಂಧಿ ಹಾಗೂ ಸಭಾ ಸಂಚಾಲಕ ಸ್ಥಾನಕ್ಕೆ ಪತ್ರಕರ್ತ ಶೇಖ್ ಬಖ್ತಿಯಾರ ಜಾಗೀರದಾರ ರಾಜಿನಾಮೆ ನೀಡಿದ್ದಾರೆ.
ಈ ಕುರಿತು ವೀರಣ್ಣಾ ಸುಗಂಧಿ ಮಾತನಾಡಿ, ತಮಗೆ ಕಸಾಪ ಕಾರ್ಯಚಟುವಟಿಕೆಗಳಲ್ಲಿ ಭಾಗವಸಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಆ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆಂದು ತಿಳಿಸಿದರು.
ಅದೇ ರಿತಿ ಶೇಖ್ ಬಖ್ತಿಯಾರ ಮಾತನಾಡಿ ಚಿಂಚೋಳಿ ಕಸಾಪ ಅಧ್ಯಕ್ಷರು ಏಕಪಕ್ಷಿಯವಾಗಿ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಸಮ್ಮೇಳನ ಐನೋಳಿ ಗ್ರಾಮದಲ್ಲಿ ಮಾಡೋಣವೆಂದು ನಿರ್ಧರಿಸಿ ನಂತರ ರಾತೋರಾತ್ರಿ ಕಲ್ಲೂರ ರೋಡ ಗ್ರಾಮಕ್ಕೆ ವರ್ಗಾಯಿಸಿದ್ದಾರೆ ಇವರ ಈ ನಿರ್ಧಾರ ಸರಿಯಲ್ಲವೆಂದು ಜಾಗೀರದಾರ ಆರೋಪಿಸಿದರು.
ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾರ್ಯಕಾರಿ ಸಮಿತಿಯ ಸಭೆ ಕರೆಯಬೇಕೆಂಬ ನಿಯಮವಿದೆ ಆದರೆ ಸಮಿತಿಯ ಸಲಹೆಯಿಲ್ಲದೇ ಇವರು ಯಾವುದೋ ಒತ್ತಡದಲ್ಲಿದ್ದು ಸಮ್ಮೇಳದ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಇವರ ನಿರ್ಧಾರ ಸರಿಯಿಲ್ಲವೆಂದು ಅವರು ಆರೋಪಿಸಿದರು.
ಇವರು ಕಸಾಪ ಸದಸ್ಯರಾಗಲಿ ಇತರೆ ಕನ್ನಡಾಭಿಮಾನಿಗಳು ಸೇರಿದಂತೆ ಇತರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನ ಬಂದಂತೆ ವರ್ತಿಸುತ್ತಿದ್ದಾರೆ ಇವರು ಇದೇ ತರಹ ಚಾಳಿ ಮುಂದುವರೆಸಿದರೆ ಕಸಾಪ ಹಳ್ಳ ಹಿಡಿಯುವುದು ಗ್ಯಾರಂಟಿ ಎಂದು ಜಾಗೀರದಾರ ಕಿಡಿಕಾರಿದರು.