ಚಿಂಚೋಳಿಯಲ್ಲಿ 10.50 ಲಕ್ಷ ಮೌಲ್ಯದ 224 ಕೆಜಿ ಗಾಂಜಾ ಜಪ್ತಿ

ಕಲಬುರಗಿ: ಗಾಂಜಾ ವಿರುದ್ಧ ಚಿಂಚೋಳಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ರವಿವಾರ ಮತ್ತೆ 10.50 ಲಕ್ಷ ರೂ. ಮೌಲ್ಯದ 224 ಕೆಜಿ ಗಾಂಜಾ ಬೆಳೆ ಜಪ್ತಿ ಮಾಡಲಾಗಿದೆ.

ತಾಲೂಕಿನ ಸಲಗರ ಬಸಂತಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಜ್ಜನಕೊಳ್ಳ ತಾಂಡಾದಲ್ಲಿ ಚಿಂಚೋಳಿ ಪೋಲಿಸರು ದಾಳಿ ನಡೆಸಿ ಅಕ್ರಮವಾಗಿ ಬೆಳೆದ ಗಾಂಜಾವನ್ನು ಪತ್ತೆ ಹಚ್ಚಿದ್ದಾರೆ.

ಸಜ್ಜನಕೊಳ್ಳ ತಾಂಡಾದ ಧನಸಿಂಗ ರಾಮಚಂದ್ರ ರಾಠೋಡ ಎಂಬಾತ ತನ್ನ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಈ ಬಗ್ಗೆ ಮಾಹಿತಿ ಮೇರೆಗೆ ಚಿಂಚೋಳಿ ಡಿವೈಎಸ್ ಪಿ ಈ.ಎಸ್.ವೀರಭದ್ರಯ್ಯ ಮತ್ತು ಸಿಪಿಐ ಮಹಾಂತೇಶ ಪಾಟೀಲ, ಪಿಎಸ್.ಐ ರಾಜಶೇಖರ ರಾಠೋಡ ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನಲ್ಲಿ ವಿವಿಧ ತಾಂಡಾಗಳಲ್ಲಿ ದಾಳಿ ನಡೆಸಿ ಇಲ್ಲಿಯವರೆಗೆ ಒಟ್ಟು 411 ಕೆಜಿ ಗಾಂಜಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.