ಚಿಂಚೋಳಿಯಲ್ಲಿ ಜಾಗೃತಿ ರಥಕ್ಕೆ ಚಾಲನೆ

ಕಲಬುರಗಿ.ಮಾ.25:ತಾಲೂಕಾಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಚಿಂಚೋಳಿ ಹಾಗೂ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಚಿಂಚೋಳಿ ನ್ಯಾಯಾಲಯ ಆವರಣದಲ್ಲಿ ಚಿಂಚೋಳಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೇಮಕುಮಾರ್ ಅವರು ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸದೇ ಕೆಲಸಕ್ಕೆ ಸೇರಿಸಿದ್ದಲ್ಲಿ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತಗೊಳ್ಳ್ಳುತ್ತದೆ. ಆದ್ದರಿಂದ ಯಾವುದೇ ಕ್ಷೇತ್ರದಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಚಿಂಚೋಳಿ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ತಾಲೂಕಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಹನಮಂತ ಹಿರೇಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಜರಿದ್ದರು.