ಚಿಂಚೋಳಿಗೆ 15.87 ಕಿ.ಮೀ.ಚತುಷ್ಪಥ ರಸ್ತೆ ಮಂಜೂರು

ಬೀದರ್,ಫೆ.3-ಬೀದರ್ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೊಳಿ ತಾಲೂಕಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯನ್ನು ದೊರೆತಿದೆ. ಒಟ್ಟು 405.30 ಕೋಟಿ ಅನುದಾನದಲ್ಲಿ 15.87 ಕಿಮೀ ಚತುಷ್ಪಥ ರಸ್ತೆಯು ಮಂಜೂರಾಗಿದ್ದು, ಈ ಹೆದ್ದಾರಿಯೂ ತೆಲಂಗಾಣ ಬಾರ್ಡರನಿಂದ ವಾಯಾ ಮಿರಿಯಾಣ, ಪೋಲಕಪಳ್ಳಿ, ಚಿಂಚೋಳಿಯವರೆಗೆ ಸಂಪರ್ಕ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಈ ಚತುಷ್ಫಥ ರಸ್ತೆ ನಿರ್ಮಾಣದಿಂದ ಚಿಂಚೋಳಿ ತಾಲೂಕಿಗೆ ಹೊಸ ಕಳೆ ಬರಲಿದೆ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳು ಅಭಿವೃದ್ದಿಗೊಳ್ಳಲಿವೆ ಹಾಗೂ ನಗರದ ಸೌಂದರ್ಯಿಕರಣವು ಹೆಚ್ಚಲಿದೆ, ಹೆದ್ದಾರಿಗೆ ಹೊಂದಿಕೊಂಡ ಎಲ್ಲಾ ಗ್ರಾಮಗಳಲ್ಲಿಯ ಜನರಿಗೂ ಮತ್ತು ಬೆರೆ ಭಾಗದ ಜನರಿಗೂ ಈ ಹೆದ್ದಾರಿಯಿಂದ ಹಲವಾರು ರಿತಿಯ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ಈಗಾಗಲೆ ಕಳೆದ 10 ವರ್ಷಗಳಲ್ಲಿ ಪಿ.ಎಮ್.ಜಿ.ಎಸ್.ವೈ ಅಡಿ ಸುಮಾರು 60 ಕೋಟಿ ಅನುದಾನದಲ್ಲಿ 60 ಕಿಮೀ. ಗ್ರಾಮೀಣ ರಸ್ತೆಗಳು ನಿರ್ಮಿಸಲಾಗಿದೆ, 5 ಕೋಟಿ ರೂಪಾಯಿಯ ವೆಚ್ಚದಲ್ಲಿ ಕೊಡ್ಲಿ ದಿಂದ ತಾಂಡುರ ವಾಯಾ ಚಿಂಚೋಳಿವರೆಗೆ, 8 ಕೋಟಿ ರೂಪಾಯಿಯ ವೆಚ್ಚದಲ್ಲಿ ಚಿಂಚೋಳಿ ಮುಖ್ಯ ರಸ್ತೆಯ ತಾಂಡುರ ರಸ್ತೆಯಿಂದ ಕೊಂಚಾವರಂವರೆಗೆ, 20 ಕೋಟಿ ರೂಪಾಯಿಯ ವೆಚ್ಚದಲ್ಲಿ ಕೊಡ್ಲಿ ಕ್ರಾಸ್‍ನಿಂದ ಚಂದನಕೇರಾ ವರೆಗೆ ರಸ್ತೆ ಅಭಿವೃದ್ಧಿಯನ್ನು ಸೆಂಟ್ರಲ್ ರೋಡ್ ಫಂಡ್ ಅಡಿಯಲ್ಲಿ ಅಭಿವೃದ್ದಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.