ಕಲಬುರಗಿ,ಸೆ.23: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಇದೇ ಸೆ.25 ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆ ವರೆಗೆ ಚಿಂಚೋಳಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ “ಜನತಾ ದರ್ಶನ” ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ಚಿಂಚೋಳಿ ಪಟ್ಟಣಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜನತಾ ದರ್ಶನ ನಡೆಯುವ ತಾಲೂಕಾ ಕ್ರೀಡಾಂಗಣ ವಿಕ್ಷಿಸಿದ ಅವರು ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಅಲ್ಲಿಯೇ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆ ಇರುವುದರಿಂದ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಬೇಕು. ಶಾಮಿಯಾನ ಟೆಂಟ್ ಹಾಕಬೇಕು. ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸಬೇಕು.
ಇಲಾಖಾವಾರು ಪ್ರತ್ಯೇಕ ಮಳಿಗೆ ತೆರೆದು ಸಾರ್ವಜನಿಕರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಕುಂದುಕೊರತೆ ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುವಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ಲೋಪದೋಶಕ್ಕೆ ಅವಕಾಶ ಮಾಡಿಕೊಡಬಾರದೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ರೇಷ್ಮೆ , ತೋಟಗಾರಿಕೆ, ಕಾರ್ಮಿಕ, ಸಂಚಾರಿ ಪೊಲೀಸ್, ಕಂದಾಯ ಹೀಗೆ ಪ್ರಮುಖ 20ಕ್ಕೂ ಹೆಚ್ಚು ಇಲಾಖೆಯ ಮಳಿಗೆ ಹಾಕಲಾಗುತ್ತಿದೆ. ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆ.ವೈ.ಸಿ., ವೋಟರ್ ಐ.ಡಿ, ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇನ್ನಿತರ ಯೋಜನೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಿಬ್ಬಂದಿಗಳು ಸ್ಥಳದಲ್ಲಿ ಇರಲಿದ್ದಾರೆ. ಕುಂದುಕೊರತೆ ಅರ್ಜಿ ಸ್ವೀಕಾರಕ್ಕೆ 10-15 ಕೌಂಟರ್ ತೆರೆಯಲಾಗುತ್ತಿದೆ. ಇದಲ್ಲದೆ ಪಿಂಚಣಿ ಆದೇಶ, ಯೋಜನೆಗಳ ಮಂಜೂರಾತಿ ಪತ್ರ ಸೇರಿದಂತೆ ವಿವಿಧ ಇಲಾಖೆಯ ಯೋಜನೆಯಡಿ ಸರಕು-ಸಾಮಗ್ರಿ ವಿತರಣೆ ಸೌಲಭ್ಯವನ್ನು ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಲಿದ್ದಾರೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ತಾಲೂಕ್ ಪಂಚಾಯತ್ ಇ.ಓ. ಶಂಕರ ರಾಠೋಡ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.