
ಬೆಂಗಳೂರು,ಆ.೧- ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಆ. ೧೧ ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಾಬುರಾವ್ಚಿಂಚನಸೂರ್ ಇಂದು ತಮ್ಮ ನಾಮಪತ್ರ ಸಲ್ಲಿಸಿದ್ದು, ಇವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.
ಈ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ದು, ಈ ಸ್ಥಾನವನ್ನು ಗೆಲ್ಲುವಷ್ಟು ಸಂಖ್ಯಾಬಲ ಕಾಂಗ್ರೆಸ್-ಜೆಡಿಎಸ್ಗೆ ಇಲ್ಲ. ಹಾಗಾಗಿ, ಈ ಪಕ್ಷಗಳಿಂದ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹಾಗಾಗಿ. ಬಾಬುರಾವ್ ಚಿಂಚನಸೂರ್ ಆಯ್ಕೆ ಅವಿರೋಧವಾಗಿ ಆಗಲಿದೆ. ಈ ಬಗ್ಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಆ. ೪ ರಂದು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ಚುನಾವಣೆಯಲ್ಲಿ ಆಯ್ಕೆಯಾಗುವ ನೂತನ ಸದಸ್ಯರ ಸದಸ್ಯತ್ವ ಅವಧಿ ೨೦ ತಿಂಗಳಾಗಿದೆ.

ಜೆಡಿಎಸ್ನ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂರವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಬಾಬುರಾವ್ಚಿಂಚನಸೂರ್ ಅವರನ್ನು ಆಯ್ಕೆ ಮಾಡಿದ್ದು, ಅವರು ಇಂದು ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಯಾದ ವಿಧಾನ ಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲು, ಸಂಸದ ಅರವಿಂದ ಜಾಧವ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.