ಚಿಂಚನಸೂರ್ ಅದ್ದೂರಿ ಅಭಿನಂದನಾ ಸಮಾರಂಭದಿಂದ ಪ್ರಿಯಾಂಕ್ ಖರ್ಗೆಗೆ ಸೋಲುವ ಭೀತಿ: ಚವ್ಹಾಣ್

ಕಲಬುರಗಿ,ಸೆ.8:ಚಿತ್ತಾಪುರದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿಯ ಶಕ್ತಿ ಪ್ರದರ್ಶನವನ್ನು ಕಂಡು ಶಾಸಕ ಪ್ರಿಯಾಂಕ್ ಖರ್ಗೆಯವರು ಸೋಲಿನ ಭೀತಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅರವಿಂದ್ ಚವ್ಹಾಣ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಅಭಿನಂದನಾ ಸಮಾರಂಭದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು. ಅನೇಕ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದು ಪ್ರಿಯಾಂಕ್ ಖರ್ಗೆಯವರ ನಿದ್ರೆ ಕೆಡಿಸಿದೆ ಎಂದರು.
ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಶಶೀಲ್ ಜಿ. ನಮೋಶಿ ಹಾಗೂ ಬಿ.ಜಿ. ಪಾಟೀಲ್ ಅವರಿಗೇಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಿಲ್ಲ ಎಂಬ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಬುರಾವ್ ಚಿಂಚನಸೂರ್ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲು ಹಲವು ಕಾರಣಗಳಿವೆ ಎಂದರು.
ಚಿತ್ತಾಪುರ ಕ್ಷೇತ್ರ ಮರು ವಿಂಗಡಣೆಗೆ ಮುನ್ನ ಬಾಬುರಾವ್ ಚಿಂಚನಸೂರ್ ಅವರು ಮೂರು ಬಾರಿ ಶಾಸಕರಾಗಿದ್ದರು. ಕೆಲವು ರಾಜಕೀಯ ಕುತಂತ್ರಗಳಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲನ್ನು ಅನುಭವಿಸಿದರು. ಅವರ ಹಿರಿತನವನ್ನು ಬಿಜೆಪಿ ಗೌರವಿಸಿದೆ ಎಂಬುದಕ್ಕೆ ಪರಿಷತ್ ಸದಸ್ಯರನ್ನಾಗಿ ಮಾಡಿದ್ದ ಸಂದೇಶವೇ ರವಾನೆಯಾಗಿದೆ ಎಂದು ಅವರು ಹೇಳಿದರು.
ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡ ಬಾಬುರಾವ್ ಚಿಂಚನಸೂರ್ ಅವರನ್ನು ಕಾಂಗ್ರೆಸ್ ಯಾವ ರೀತಿ ಮೂಲೆಗುಂಪು ಮಾಡಲಾಯಿತು ಎಂಬುದನ್ನು ಚಿತ್ತಾಪುರ ಕ್ಷೇತ್ರದ ಜನತೆಗೆ ತಿಳಿಸಬೇಕಾಗಿತ್ತು. ಸಪ್ತ ಖಾತೆಗಳ ಸಚಿವರಾಗಿದ್ದ ಚಿಂಚನಸೂರ್ ಅವರನ್ನು ಮೂಲೆಗುಂಪು ಮಾಡಿ ಮೊದಲ ಬಾರಿ ಶಾಸಕನಾಗಿದ್ದ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನ ಪಡೆಯಲು ಯಾವ ಅರ್ಹತೆ ಹೊಂದಿದ್ದರು? ಎಂದು ಪ್ರಶ್ನಿಸಿದ ಅವರು, ಕೇವಲ ತಂದೆ ಹೆಸರಿನಲ್ಲಿ ರಾಜಕೀಯಕ್ಕೆ ಬಂದ ಪ್ರಿಯಾಂಕ್ ಖರ್ಗೆಯವರಿಗೆ ಪಕ್ಷಕ್ಕಾಗಿ ದುಡಿದವರನ್ನು, ಹಿರಿಯ ಮುಖಂಡರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ತಿಳಿದಿಲ್ಲ. ಇದೇ ದುರಹಂಕಾರವೇ ಸೋಲಿಲ್ಲದ ಸರ್ದಾರರಾಗಿದ್ದ ಅವರ ತಂದೆಗೆ ಸೋಲಿಣಿಸಿದ್ದು ಎಂಬುದನ್ನು ಮತ್ತೊಮ್ಮೆ ನೆನಪಿಸಲು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಅಭಿನಂದನಾ ಸಮಾರಂಭಕ್ಕೆ ಕೇವಲ ನೆಪಮಾತ್ರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಆಗಮಿಸಿದ್ದರು. ಆದಾಗ್ಯೂ, ಅದು ಬಿಜೆಪಿಯ ಶಕ್ತಿ ಪ್ರದರ್ಶನವಾಗಿತ್ತು. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮನೆಗೆ ಕಳಿಸಲು ಕಾರ್ಯಕ್ರಮ ನಾಂದಿ ಹಾಡಿದೆ ಎಂದು ಅವರು ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ಸಿನವರನ್ನು ಹೈಜಾಕ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಅಸಲಿ ಬಿಜೆಪಿಯೇ ಉಳಿದಿಲ್ಲ ಎಂಬ ಖರ್ಗೆಯವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಸಂಸದ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ ಬಿಡಲು ಪ್ರಿಯಾಂಕ್ ಖರ್ಗೆಯೇ ಕಾರಣ. ತಂದೆಯ ಪ್ರಭಾವದಿಂದ ದಿ. ಖಮರುಲ್ ಇಸ್ಲಾಂ ಅವರೂ ಸೇರಿದಂತೆ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದರು. ಕಾಂಗ್ರೆಸ್ಸಿನಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಅವರೆಲ್ಲ ಬಿಜೆಪಿ ಸೇರಿದರು ಎಂದರು.
ಇತ್ತೀಚೆಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ನಕಲಿ ಗಾಂಧಿ ಕುಟುಂಬದ ಕಥೆ ಹಾಗೂ ಗುಲಾಮಗಿರಿಯನ್ನು ವಿವರಿಸಿದ್ದಾರೆ. ಚಿತ್ತಾಪುರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆಯವರು ಹೇಳಿಕೊಂಡು ಓಡಾಡುತ್ತಿದ್ದಾರೆ. ಅದರಲ್ಲಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ಸಲಹೆ ನೀಡಿದ್ದಾರೆ. ನೀವು ಭಾರತ್ ಜೋಡೋ ಮಾಡುವ ಮುನ್ನ ಕಾಂಗ್ರೆಸ್ ಜೋಡೋ ಅಭಿಯಾನಾ ಹಮ್ಮಿಕೊಳ್ಳಿ ಎಂದಿದ್ದಾರೆ ಎಂದು ಖರ್ಗೆಯವರಿಗೆ ಚವ್ಹಾಣ್ ಅವರು ಗೇಲಿ ಮಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಚುನಾವಣೆಯಲ್ಲಿ ಸೋಲಿಸಿದರು. ಆದಾಗ್ಯೂ, ಬಿಜೆಪಿಯವರು ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರು. ಅಂತವರು ನನ್ನ ವಿರುದ್ಧ ಮಾತನಾಡುತ್ತಾರೆ ಎಂಬ ಪ್ರಿಯಾಂಕ್ ಖರ್ಗೆಯವರ ಟೀಕೆಗೆ ಉತ್ತರಿಸಿದ ಅವರು, ಖರ್ಗೆಯವರ ತಂದೆ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಲೋಕಸಬಾ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಪಕ್ಷ ಹಿಂಬಾಗಿಲಿನಿಂದ ಸಂಸತ್ ಪ್ರವೇಶಿಸಿ ಈಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಹಂಗಿಸಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಗುಲಾಮಗಿರಿಗೆ ಮಣೆ ಹಾಕುವ ಪಕ್ಷ ಅಲ್ಲ. ಪಕ್ಷದ ಕಟ್ಟಕಡೆಯ ವ್ಯಕ್ತಿಯೂ ವಿಧಾನಸಭೆ ಹಾಗೂ ಸಂಸತ್ತಿಗೆ ಹೋದ ನಿದರ್ಶನವಿದೆ. ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಕುರಿತು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಸಹ ಈ ಬಾರಿ ಚಿತ್ತಾಪುರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದೂ ನನ್ನಿಂದ. ನಾನು ಹಗರಣಗಳನ್ನು ಬಯಲಿಗೆಳೆಯುತ್ತಿರುವುದರಿಂದ ಚಿಂಚನಸೂರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಬಿಜೆಪಿ ಮಾಡಿದೆ ಎಂಬ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿಯೇ ಪಿಎಸ್‍ಐ ಹಗರಣ, ಕೆಪಿಟಿಸಿಎಲ್ ಹಗರಣ ಮುಂತಾದವು ಆಗಿವೆ. ಹಗರಣಗಳನ್ನು ಗೊಬ್ಬರ ಹಾಕಿ ಬೆಳೆಸಿದ್ದೇ ಕಾಂಗ್ರೆಸ್. ಈಗ ಬಿಜೆಪಿ ಸರ್ಕಾರವು ಅದನ್ನು ಬುಡ ಸಮೇತ ಕಿತ್ತು ಹಾಕಲು ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರು ನನಗೆ ಸೋಲಿಸಲು ಬಿಜೆಪಿಯವರು ಐದು ಕಾರಣಗಳನ್ನು ಕೊಡಿ ಎಂದು ಕೇಳಿದ್ದಕ್ಕೆ ಕಾರಣಗಳನ್ನು ನೀಡಿದ ಚವ್ಹಾಣ್ ಅವರು, ಚಿತ್ತಾಪುರ ಕ್ಷೇತ್ರದಲ್ಲಿ ಕಳಪೆ ಮಟ್ಟದ ರಸ್ತೆಗಳು, ಪ್ರತಿ ಸರ್ಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ, ಫೇಸಬುಕ್, ಟ್ವಿಟರ್‍ನಲ್ಲಿ ಮಾತ್ರ ಅಭಿವೃದ್ಧಿ, ಶಾಸಕರ ವಿರುದ್ಧ ಮಾತನಾಡಿದವರ ಮೇಲೆ ದಬ್ಬಾಳಿಕೆ, ಚಿತ್ತಾಪುರಕ್ಕೆ ಅಪರೂಪದ ಅತಿಥಿಯಾಗಿರುವ ಶಾಸಕರು ಎಂದು ಉತ್ತರಿಸಿದರು.
ಚಿತ್ತಾಪುರ ಮತಕ್ಷೇತ್ರ ಮೊಮ್ಮಗನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಿಯಾಂಕ್ ಖರ್ಗೆಯವರು ನೀಡಿದ ಹೇಳಿಕೆಯು ಅವರ ಸಂಕುಚಿತತೆಗೆ ಹಿಡಿದ ಕೈಗನ್ನಡಿಯಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಮೊಮ್ಮಕ್ಕಳು ಸಾಕಷ್ಟು ಜನ ಬಿಜೆಪಿಯಲ್ಲಿದ್ದಾರೆ. ಕೇವಲ ಪ್ರಿಯಾಂಕ್ ಖರ್ಗೆ ಅಷ್ಟೇ ಅಲ್ಲ. ಪ್ರಿಯಾಂಕ್ ಖರ್ಗೆಯವರ ತಾಯಿಯ ಊರು ಗುಂಡಗುರ್ತಿಯಿಂದಾಗಿ ಅವರು ಆ ಮಾತು ಹೇಳಿದ್ದಾರೆ. ನಾನೂ ಸಹ ನನ್ನ ತಾಯಿ ಊರು ಹಲಕರ್ಟಿ ಇದೆ. ನನ್ನಂತಹ ಮೊಮ್ಮಕ್ಕಳು ಬಿಜೆಪಿಯಲ್ಲಿದ್ದಾರೆ ಎಂದು ಅರವಿಂದ್ ಚವ್ಹಾಣ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ನಾಟೀಕಾರ್, ಸಾಬಣ್ಣ ಡಿಗ್ಗಿ, ಬಸವರಾಜ್ ಪಾಂಚಾಳ್ ಮುಂತಾದವರು ಉಪಸ್ಥಿತರಿದ್ದರು.