ಚಾ.ನಗರ ಲೋಕಸಭಾ ಕ್ಷೇತ್ರ ಸುನಿಲ್ ಬೋಸ್‍ಗೆ ಕೈ ಟಿಕೆಟ್ ಗ್ಯಾರಂಟಿ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.26- ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಕೊನೆಗೂ ಕೈ ವರಿಷ್ಠರು ಟಿಕೆಟ್ ಅಂತಿಮಗೊಳಿಸಿದ್ದು ಸಚಿವ ಎಚ್.ಸಿ.ಮಹಾದೇವಪ್ಪ ಪುತ್ರ ಸುನೀಲ್ ಬೋಸ್‍ಗೆ ಟಿಕೆಟ್ ಖಾತ್ರಿಯಾಗಿದೆ.
ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಈ ಬಗ್ಗೆ ಖಚಿತ ಪಡಿಸಿದ್ದು; ಸಚಿವ ಎಚ್.ಸಿ.ಮಹಾದೇವಪ್ಪ ಅವರು ಪಟ್ಟು ಬಿಡದೇತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿದ್ದು ಇಂದು ಸಂಜೆ ಇಲ್ಲವೇ ಮಂಗಳವಾರದಂದು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ಮಾ.28 ರಿಂದ ಚಾಮರಾಜನಗರ ಜಿಲ್ಲೆಯ ಹನೂರಿನಿಂದ ಸುನೀಲ್ ಬೋಸ್ ಅಧಿಕೃತವಾಗಿ ತಮ್ಮ ಪ್ರಚಾರ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದ್ದು ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆ.
ಅಪ್ಪನ ಬಳಿಕ ಲೋಕಸಭೆ ಚುನಾವಣೆಗೆ ಮಗ: ಸಚಿವ ಎಚ್.ಸಿ.ಮಹಾದೇವಪ್ಪ ಕೂಡ ಈ ಹಿಂದೆ 1991 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.
ಈಗ ಪುತ್ರ ಅಪ್ಪನ ಬಳಿಕ ಲೋಕ ಅಖಾಡಕ್ಕೆ ಧುಮುಕಿ ಅದೃಷ್ಟ ಪರೀಕ್ಷೆ ಗಿಳಿಯುವುದು ಪಕ್ಕಾ ಆಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರ ಒಳಪಡಲಿದ್ದು ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರೇ ಇದ್ದರೆ ಹನೂರಿನಲ್ಲಿ ಮಾತ್ರ ಜಾ.ದಳದ ಶಾಸಕರಿದ್ದಾರೆ.