ಚಾ.ನಗರ ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ


ಚಾಮರಾಜನಗರ, ನ.19- ಕೋವಿಡ್ 19 ಸೇರಿ ಹೊಸ ಹೊಸ ವೈರಾಣುಗಳು ಪತ್ತೆಯಾಗುತ್ತಿರುವ ಕೇರಳದ ವೈನಾಡಿನಲ್ಲಿ ಹೊಸ ವೈರಾಣು ನ್ಯೂರೋ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮೂಲೆಹೊಳೆ ಚೆಕ್‍ಪೋಸ್ಟ್ ಪ್ರವೇಶಿಸುವವರ ಮೇಲೆ ವಿಶೇಷ ಗಮನ ನೀಡಲಾಗಿದೆ.
ದೇಶದಲ್ಲಿಯೇ ಕೊರೊನಾ, ನಿಫಾ, ಡೆಲ್ಟಾ ಸೇರಿದಂತೆ ಹೊಸ ವೈರಸ್‍ಗಳು ಕೇರಳದಲ್ಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದ್ದು, ಇದೀಗ ಕೇರಳದಲ್ಲಿ ಕಂಡುಬಂದಿರುವ ವೈರಸ್ ಪಟ್ಟಿಗೆ ಹೊಸದಾಗಿ ನ್ಯೂರೋ ವೈರಸ್ ಸೇರಿಕೊಂಡಿದೆ, ಇದರಿಂದ ಕೇರಳ-ಕರ್ನಾಟಕ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲ್ಲೂಕಿನ ಗಡಿಯಂಚಿನ ಗ್ರಾಮ ಮತ್ತು ಹಾಡಿಗಳ ಜನರು ಯಾವುದೇ ಆತಂಕಕ್ಕೆ ಒಳಗಾಗದೇ, ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು.
ಕೈ-ಕಾಲುಗಳನ್ನು ಸ್ವಚ್ಛಗೊಳಿಸುವುದು, ಶುದ್ದವಾದ ನೀರು ಹಾಗೂ ಬಿಸಿನೀರು, ಬಿಸಿ ಪದಾರ್ಥಗಳ ಬಳಕೆ ಮಾಡಬೇಕು. ಬಯಲು ಶೌಚಾಲಯ ಅವಲಂಭಿಸಬಾರದು. ವೈರಸ್ ಗುಣಲಕ್ಷಣಗಳಾದ ವಾಂತಿ ಬೇದಿ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಗಡಿಭಾಗದ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಮೂಲೆಹೊಳೆ ಚೆಕ್‍ಪೋಸ್ಟ್ ಮೂಲಕ ಚಾಮರಾಜನಗರ ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ಕಾರ್ಯಕರ್ತರು ಪರೀಕ್ಷಿಸಿ, ವೈರಸ್‍ನ ಗುಣಲಕ್ಷಣಗಳಾದ ವಾಂತಿ ಬೇದಿಯಾಗುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ, ಪ್ರಕರಣಗಳು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವ ಸಂಬಂಧ ಸೂಕ್ತ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ.
ಅಲ್ಲದೇ ಮಾರುಕಟ್ಟೆ, ಬೀದಿ ಬದಿ ವ್ಯಾಪಾರಗಳು ಹೆಚ್ಚಾಗಿ ಕಂಡುಬರುವ ಭಾಗಗಳಲ್ಲಿ ಮೊಬೈಲ್ ಯೂನಿಟ್ ಅನ್ನು ನಿಯೋಜಿಸಿಕೊಂಡು, ಸಾರ್ವಜನಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಶ್ವೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.