ಚಾ.ನಗರ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.27-ಚಾಮರಾಜನಗರ ಪ.ಜಾತಿ ಮೀಸಲು ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರಗೊಂಡಿದೆ.
ಬೆಳಿಗ್ಗೆ 7 ರಿಂದಲೇ ಮತದಾನ ಕೇಂದ್ರ ತೆರೆದರೂ ಮತಗಟ್ಟೆಗೆ ತೆರಳದ ಮತದಾರರು ನಂತರ ನಿಧಾನವಾಗಿ ಮತಗಟ್ಟೆಯ ಕಡೆಗೆ ಹೆಜ್ಜೆ ಹಾಕಿದರು. ಮಧ್ಯವಯಸ್ಕರಿಗಿಂತ ಹಿರಿಯರೇ ಉತ್ಸಾಹದಲ್ಲಿ ಮತ ಚಲಾಯಿಸಿದರು.
ಹೃದ್ರೋಗ ಸಮಸ್ಯೆಯಿದ್ದರೂ ಸಹ ಮೈಸೂರಿನಲ್ಲಿ ವಾಸವಿದ್ದ ನಿವೃತ್ತ ಶಿಕ್ಷಕ ರಾಜೇಂದ್ರ ರವರು ಮೈಸೂರಿನಿಂದ ಆಗಮಿಸಿ ನಗರದಲ್ಲಿ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ಹಾಗೆಯೇ ಇನ್ನೂ ಅನೇಕರು ದೂರದ ಊರುಗಳಿಂದ ಆಗಮಿಸಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಆದರೆ ಅನೇಕ ನಗರ ವಾಸಿಗಳು ಮಾತ್ರ ಮನೆಯಿಂದ ಹೊರಗಡೆ ಬಾರದೆ ಮತ ಚಲಾಯಿಸದೇ ಬೇಜವಬ್ದಾರಿತನ ತೋರಿದ್ದಾರೆ.
ಸೆಲ್ಫಿ ಪಾಯಿಂಟ್ : ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರು ಮತದಾನ ಮಾಡಿರುತ್ತಾರೆ. ಅದರಲ್ಲೂ ಮೊದಲ ಬಾರಿಗೆ ಮತದಾನ ಹಕ್ಕನ್ನು ಪಡೆದ ಯುವಕ ಯುವತಿಯರು ಉತ್ಸಾಹದಿಂದ ಮತದಾನ ಮಾಡಿ ಮತಗಟ್ಟೆಗಳಲ್ಲಿ ನಿರ್ಮಿಸಿದ್ದ ಸೆಲ್ಫಿ ಪಾಯಿಂಟ್‍ಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು, ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಪಟ್ಟರು.
ಸಂಜೆ 6 ಗಂಟೆಯಾಗುತ್ತಿದ್ದಂತೆ ಮತಗಟ್ಟೆ ಅಧಿಕಾರಿಗಳು ಮತದಾನ ಕೇಂದ್ರದ ಬಾಗಿಲುಗಳನ್ನು ಮುಚ್ಚಿದ ನಂತರ ಪೆÇಲೀಸ್ ಭಧ್ರತೆಯೊಂದಿಗೆ ಇವಿಎಂ ಪೆಟ್ಟಿಗೆಯನ್ನು ತೆಗೆದುಕೊಂಡು ತೆರಳಿದ ಅಧಿಕಾರಿಗಳು ಚಾಮರಾಜನಗರದ ಇಂಜಿನಿಯನಿರಿಂಗ್ ಕಾಲೇಜಿನ ಸ್ಟ್ರಾಂಗ್‍ರೂಂ ಸೇರಿಸಿದ್ದಾರೆ. ಇನ್ನೂ ಸುಮಾರು 1 ತಿಂಗಳುಗಳ ಕಾಲ ಅಂದರೆ ಮತ ಎಣಿಕೆ ದಿನದವರೆಗೂ ಪೋಲಿಸರ ಸರ್ಪಗಾವಲಿನಲ್ಲಿ ಇವಿಎಂ ಯಂತ್ರಗಳು ಇರಲಿವೆ.
ಕಳೆದ ಒಂದು ತಿಂಗಳಿನಿಂದ ಸುಡು ಬಿಸಲನ್ನೂ ಲೆಕ್ಕಿಸದೇ ಮತಯಾಚನೆ ನಡೆಸಿ ಬೆಂಡು ಬಳಲಿದ್ದ ಅಭ್ಯರ್ಥಿಗಳು ಈಗ ರಿಲ್ಯಾಕ್ಸ್ ಮೂಡಿಗೆ ಹೋಗಿದ್ದಾರೆ.
ಕಾಂಗ್ರೆಸ್-ಬಿಜೆಪಿ ನಡುವೆ ಹಣಾಹಣಿ: ಕಣದಲ್ಲಿ ಅನೇಕ ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಸಚಿವ ಹೆಚ್.ಸಿ. ಮಹದೇವಪ್ಪ ಪುತ್ರ ಸುನಿಲ್‍ಬೋಸ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ನಡುವೆ ಜಿದ್ದಾಜಿದ್ದಿ ನಡೆದಿದೆ ಎಂದು ಕೇತ್ರದ ಅನೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರೂ ತಮ್ಮ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಘಟಾನುಘಟಿ ನಾಯಕರುಗಳ ಪ್ರಚಾರ: ಶತಯಾಗತಾಯ ತಮ್ಮ ಪುತ್ರನನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದ ಸಚಿವ ಹೆಚ್.ಸಿ. ಮಹದೇವಪ್ಪ ತಮ್ಮ ಪುತ್ರನ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್ ಸೇರಿದಂತೆ ಅನೇಕ ನಾಯಕರನ್ನು ಪ್ರಚಾರಕ್ಕೆ ಕರೆತಂದಿದ್ದರು. ಇನ್ನೂ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ಘಟಾನುಘಟಿ ನಾಯಕರುಗಳು ಭರ್ಜರಿ ಪ್ರಚಾರ ನಡೆಸಿದ್ದರು.
ಒಟ್ಟಾರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ವಿಜಯ ಮಾಲೆ ಒಲಿಯಲಿದೆ ಎಂದು ಮತ ಎಣಿಕೆಯವರೆಗೂ ಕಾಯಲೇಬೇಕಾಗಿದೆ.