ಚಾ.ನಗರದಲ್ಲಿ ಮುಂದುವರಿದ ಕಫ್ರ್ಯೂ

??????

ಚಾಮರಾಜನಗರ, ಏ.25- ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಲಾಕ್‍ಡೌನ್ ಎರಡನೇ ದಿನವಾದ ಇಂದು ಕೂಡ ನಗರದಲ್ಲಿ ಸಂಪೂರ್ಣ ಯಶಸ್ಸುಗೊಂಡಿದೆ.
ಇಂದು ಕೂಡ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಾದ ದಿನಸಿ ಪದಾರ್ಥಗಳು, ಹಾಲು, ಮೊಸರು ಮತ್ತು ಮೀನು, ಮಾಂಸ ಖರೀದಿಗೆ ಅವಕಾಶ ನೀಡಲಾಗಿತ್ತು. 10 ಗಂಟೆಯ ನಂತರ ಎಲ್ಲಾ ದಿನಸಿ ಅಂಗಡಿಗಳು, ನಂದಿನಿ ಬೂತ್‍ಗಳು ಬಾಗಿಲು ಮುಚ್ಚಿದವು. ನಿನ್ನೆಯೇ ಸುಮಾರು ಜನ ಅಗತ್ಯ ವಸ್ತುಗಳನ್ನು ಕೊಂಡುಕೊಂಡಿದ್ದರಿಂದ ಇಂದು ಅಷ್ಟಾಗಿ ಅಂಗಡಿ ಮುಗ್ಗಟ್ಟುಗಳ ಮುಂದೆ ಜನಜಂಗುಳಿ ಕಂಡು ಬರಲಿಲ್ಲ.
ಹಣ್ಣು, ತರಕಾರಿಯ ಅಂಗಡಿಗಳವರು ಸಹ ಹೆಚ್ಚಿನ ಪದಾರ್ಥಗಳನ್ನು ಮಾರಾಟ ಮಾಡದೇ ಇರುವ ದಾಸ್ತಾನುಗಳೆನ್ನೆಲ್ಲಾ ಖಾಲಿ ಮಾಡಿದರು.
ಪೋಲಿಸರು ನಗರದ ವಿವಿಧ ಭಾಗಗಳಲ್ಲೆಲ್ಲಾ ಗಸ್ತು ತಿರುಗುತ್ತಿರುವುದರಿಂದ ನಿನ್ನೆಗಿಂತ ಇಂದು ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಬ್ರೇಕ್ ಬಿದ್ದಿದೆ. ಬೇಕಾಬಿಟ್ಟಿ ತಿರುಗಾಡುತ್ತಿದ್ದವರಿಗೆ ಖುದ್ದು ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪರವರೇ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.
ಇದರಿಂದ ರಸ್ತೆಗಳಲ್ಲಿ ಜನಸಂದಣಿ ತುಂಬಾ ಕಡಿಮೆ ಕಂಡುಬಂದಿತ್ತು. ಇಂದು ಕೂಡ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಇದ್ದರೂ ಪ್ರಯಾಣಿ ಕರಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಇನ್ನೂ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಗಳಲ್ಲಿ ಭಾನುವಾರ ಸಹ ಆಗಿದ್ದ ರಿಂದ ಬಾಗಿಲು ತೆರೆಯುವ ಗೊಡವೆಗೇ ಹೋಗಿರುವುದಿಲ್ಲ.
ಗುಂಡ್ಲುಪೇಟೆ ವೃತ್ತ, ಪಚ್ಚಪ್ಪ ವೃತ್ತ, ಸಂತೇಮರಹಳ್ಳಿ ವೃತ್ತಗಳು ಬಿಕೋ ಎಂದವು.ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ,ರಥದ ಬೀದಿಯಲ್ಲಿ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು.
ಉಳಿದಂತೆ ಆಸ್ಪತ್ರೆ, ಮೆಡಿಕಲ್ ಸ್ಟೋರ್‍ಗಳು ಮಾತ್ರ ತೆರೆದು ಸೇವೆ ನೀಡಿದವು.