ಚಾ.ನಗರಕ್ಕೆ ಆಕ್ಸಿಜನ್ ಕೊಡದಿರಲು ರೋಹಿಣಿ ಸೂಚಿಸಿದರು

ಮೈಸೂರು: ಜೂ.06: ಚಾಮರಾಜನಗರ ಜಿಲ್ಲಾಸ್ಪತ್ರೆ ಆಮ್ಲಜನಕ ದುರಂತದ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಪರವಾಗಿ ಮಾತನಾಡಿದ್ದ ಸಂಸದ ಪ್ರತಾಪಸಿಂಹ ಈಗ ತಮ್ಮ ಹೇಳಿಕೆಯನ್ನು ಬದಲಾಯಿಸಿರುವುದು ಅಚ್ಚರಿ ಮೂಡಿಸಿದೆ.
ಶನಿವಾರ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಆಡಳಿತದಲ್ಲಿದೆ. ಎಲ್ಲಾ ಅಧಿಕಾರಿಗಳು ನಮ್ಮ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ನಾವು ಕೆಲವು ವಿಚಾರಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಸುರೇಶ್ ಕುಮಾರ್ ಅವರು ನಮ್ಮ ಜಿಲ್ಲೆಯ ಡಿಸಿ ಮೇಲೆ ದೂರಿದರು. ಆದರೆ ಅವತ್ತು ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು, ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಜಗಳವಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಅಂದು ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದ ಕುರಿತಾಗಿ ಸಮರ್ಥನೆ ಮಾಡಿಕೊ0ಡಿದ್ದೆ. ಆದರೆ ನನಗೆ ಅದರ ಕುರಿತಾದ ಸತ್ಯಾಸತ್ಯತೆ ಏನು ಎಂದು ನನಗೆ ಗೊತ್ತಿತ್ತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಡಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸಂಸದ ಪ್ರತಾಪಸಿಂಹ, ಜಿಲ್ಲಾಸ್ಪತ್ರೆ ದುರಂತಕ್ಕೆ ರೋಹಿಣಿ ಸಿಂಧೂರಿ ಅವರೇ ಕಾರಣ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿ ತಮ್ಮ ಇಬ್ಬಂದಿ ತನದ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೌಖಿಕ ಸೂಚನೆಯಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಮ್ಲಜನಕ ಪೂರೈಕೆಗೆ ಅಡ್ಡಿಯಾಗಿತ್ತು ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದಿರಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೌಖಿಕವಾಗಿ ಸೂಚನೆ ನೀಡಿದ್ದರು. ಸೂಚನೆಯಲ್ಲಿ ಏನಿತ್ತು, ಯಾಕಾಗಿ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಹೋಗಲಿಲ್ಲಾ ಎಂಬುದು ಗೊತ್ತಿದೆ. ಈಗ ಬಂದಿರುವುದು ತೇಪೆ ಹಾಕುವ ವರದಿ. ಸದ್ಯ ನ್ಯಾಯಂಗ ತನಿಖೆ ಆರಂಭವಾಗಿದೆ. ತನಿಖೆ ನಂತರ ಸತ್ಯಾಸತ್ಯತೆ ಎಲ್ಲರಿಗೂ ಗೊತ್ತಾಗಲಿದೆ. ತಾಂತ್ರಿಕವಾಗಿ ಸಾಕ್ಷಿ ಸಿಗದಿರಬಹುದು. ಆದರೆ, ಅದರೊಳಗೆ ಏನು ನಡೆದಿದೆ ಎಂದು ಮೈಸೂರಿಗನಾಗಿ ನಮಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.
ಪದಕಿ ಏಜೆನ್ಸಿಯ ಅನಿಲ್ ಪದಕಿ ಅವರನ್ನು ಕೇಳಿದರೆ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಏಕೆ ಕೊಡಲಿಲ್ಲಾ ಎಂಬುದು ಗೊತ್ತಾಗಲಿದೆ. ಇದೆಲ್ಲಾ ಸಾಮಾಜಿಕ ಜಾಲಾತಾಣ ಬಳಸುವವರಿಗೆ ಗೊತ್ತಾಗುವುದಿಲ್ಲ. ಎಲ್ಲೋ ಕುಳಿತುಕೊಂಡು ಸುಮ್ಮನೆ ಯಾರಿಗೋ ಜೈಕಾರ ಹಾಕುತ್ತೀರಾ, ಧಿಕ್ಕಾರ ಹಾಕುತ್ತೀರಾ. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವುದು ನಮ್ಮ ಸರ್ಕಾರ. ಡೀನ್, ಡಿಎಚ್‍ಒ ಎಲ್ಲರೂ ನಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಚಿವ ಸುರೇಶ್ ಕುಮಾರ್ ಸಹ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ದೂರಿದ್ದರು. ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು. ಮೈಸೂರು, ಚಾಮರಾಜನಗರ, ಮಂಡ್ಯ ಮಧ್ಯೆ ಜಗಳವಾಗುತ್ತೆ ಎಂದು ನಾನು ಅಂದು ಹೇಳಿದ್ದೆ. ನನಗೆ ಆಕ್ಸಿಜನ್ ದುರಂತದ ಸತ್ಯಾಸತ್ಯತೆ ಗೊತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ್ದರು. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗ್ಗಿನ ಜಾವದವರೆಗೆ ಆಕ್ಸಿಜನ್ ಇರಲಿಲ್ಲ. ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ನೀಡಲಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ದೂರಿದ್ದರೆ ಇತ್ತ ರೋಹಿಣಿ ಸಿಂಧೂರಿ ಚಾಮರಾಜನಗರ ಜಿಲ್ಲಾಡಳಿತ ಸರಿಯಾಗಿ ಸಂವಹನ ಮಾಡಿರಲಿಲ್ಲ ಎಂದು ಆರೋಪಿಸಿದ್ದರು.