ಚಾಲಾಕಿ ಕಳ್ಳನ ಬಂಧನ: ಚಿನ್ನಾಭರಣ, ಮೊಬೈಲ್ ವಶ

ಕಲಬುರಗಿ,ನ.15-ರಾತ್ರಿ ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬನನ್ನು ಬಂಧಿಸಿರುವ ಸಬ್ ಅರ್¨ನ್ ಠಾಣೆ ಪೊಲೀಸರು ಚಿನ್ನಾಭರಣ, 2 ಮೊಬೈಲ್ ಸೇರಿ 95 ಸಾವಿರ ರೂ.ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸೈಯದ್ ಚಿಂಚೋಳಿ ರಸ್ತೆಯ ಆಶ್ರಯ ಕಾಲೋನಿಯ ವಿನೋದ ನಾಮದೇವ ರಾಠೋಡ್ ಎಂಬಾತನನ್ನು ಬಂಧಿಸಿ 80 ಸಾವಿರ ರೂ.ಮೌಲ್ಯದ ಬಂಗಾರದ ತಾಳಿಚೈನ್ ಮತ್ತು 10 ಮತ್ತು 5 ಸಾವಿರ ರೂ.ಮೌಲ್ಯದ 2 ಮೊಬೈಲ್ ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರದ ಶೋಭಾ ಗುರುಪ್ರಸಾದ ಗೋರಂಟ್ಲಾ ಅವರು ತಲೆ ದಿಂಬಿನ ಕೆಳಗೆ ಇಟ್ಟಿದ್ದ 80 ಸಾವಿರ ರೂ.ಮೌಲ್ಯದ 22 ಗ್ರಾಂ.ಬಂಗಾರದ ತಾಳಿಚೈನ್, ತುಳಜಾಪುರ ಪಾದಯಾತ್ರೆ ಹೋಗುವಾರ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯಾದಗಿರಿಯ ಈರಣ್ಣ ಗುಳಗಿ ಅವರ ಮತ್ತು ನಾಗನಗೌಡ ಪೊಲೀಸ್ ಪಾಟೀಲ ಅವರ ಮೊಬೈಲ್ ಕಳವಾಗಿದ್ದವು. ಈ ಸಂಬಂಧ ಶೋಭಾ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಐ.ಎ.ಚಂದ್ರಪ್ಪ, ಎಸಿಪಿ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಪಿಐ ಸಂತೋಷ ತಟ್ಟೆಪಳ್ಳಿ ಅವರ ನೇತೃತ್ವದಲ್ಲಿ ಪಿಎಸ್‍ಐ ಸಲಿಮೋದ್ದಿನ್, ಸಿಬ್ಬಂದಿಗಳಾದ ನೆಹರು ಸಿಂಗ್, ಅನೀಲ, ನಾಗೇಂದ್ರ, ವೆಂಕಟೇಶ, ಮೊಹ್ಮದ್ ಜಾಹೀರ್, ವಿಠ್ಠಲ ಅವರು ತನಿಖೆ ನಡೆಸಿ ಆರೋಪಿ ವಿನೋದ ನಾಮದೇವ ರಾಠೋಡ್‍ನನ್ನು ಬಂಧಿಸಿ 80 ಸಾವಿರ ರೂ.ಮೌಲ್ಯದ ಚಿನ್ನಾಭರಣ ಮತ್ತು 15 ಸಾವಿರ ರೂ.ಮೌಲ್ಯದ 2 ಮೊಬೈಲ್ ಸೇರಿ 95 ಸಾವಿರ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.