ಚಾಲಕ ರಹಿತ ಮೆಟ್ರೋ ಸೇವೆ ಆರಂಭ

ನವದೆಹಲಿ, ನ.೨೫-ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಯನ್ನು ಜಾರಿಗೆ ತಂದ ದೆಹಲಿ ಮೆಟ್ರೋ ರೈಲು ನಿಗಮ ಈಗ ಮತ್ತೊಂದು ಮಾರ್ಗದಲ್ಲೂ ಚಾಲಕ ರಹಿತ ರೈಲು ಸೇವೆಗೆ ಇಂದು ಚಾಲನೆ ದೊರೆತಿದೆ.
ದೆಹಲಿ ಮೆಟ್ರೋದ ೫೭ ಕಿಮೀ ಪಿಂಕ್ ಲೈನ್‌ನಲ್ಲಿ ಚಾಲಕ ರಹಿತ ರೈಲು ಕಾರ್ಯಾಚರಣೆಗೆ ಇಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇದನ್ನು ಚಾಲನೆ ನೀಡಿದರು.
ಇತರ ಮೆಟ್ರೋ ರೈಲುಗಳಿಗಿಂತಲೂ ಚಾಲಕ ರಹಿತ ರೈಲು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಶೇ.೧೦ರಷ್ಟು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದೆ. ಜೊತೆಗೆ ವೇಗವೂ ಹೆಚ್ಚು. ಗರಿಷ್ಠ ೯೫ ಕಿ.ಮೀ. ವೇಗದ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಮೆಟ್ರೋ ವೇಗವನ್ನು ಗರಿಷ್ಠ ೮೫ ಕಿ.ಮೀ.ಗೆ ನಿಗದಿ ಮಾಡಿದೆ.
ಅಲ್ಲದೆ, ಈ ಹಿಂದೆ ಮಜ್ಲಿಸ್ ಪಾರ್ಕ್‌ನಿಂದ ಶಿವ ವಿಹಾರ್‌ವರೆಗೆ ವ್ಯಾಪಿಸಿರುವ ಪಿಂಕ್ ಲೈನ್ ೨೦೨೧ ರ ಮಧ್ಯದ ವೇಳೆಗೆ ಚಾಲಕ ರಹಿತ ಕಾರ್ಯಾಚರಣೆಯನ್ನು ಹೊಂದಿರುತ್ತದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದರು.
ಇನ್ನೂ ದೇಶದ ಮೊದಲ ಚಾಲಕ ರಹಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ರ ಡಿಸೆಂಬರ್ ೨೮ ರಂದು ೩೭ ಕಿಮೀ ಮೆಜೆಂಟಾ ಲೈನ್‌ನಲ್ಲಿ (ಜನಕಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್) ಸೇವೆಗೆ ಚಾಲನೆ ನೀಡಿದ್ದರು.