ಚಾಲಕರ ರಕ್ಷಣೆಗೆ ಸಂಘಟನೆ ಸದಾ ಬದ್ಧ-ಜೈನ್

ಗೌರಿಬಿದನೂರು.ಜೂ೨:ತಮ್ಮಲ್ಲಿರುವ ವೃತ್ತಿ ಕೌಶಲ್ಯದಿಂದ ಚಾಲಕ ಕಾರ್ಯವನ್ನು ನಡೆಸಿಕೊಂಡು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಮಂದಿ ಯುವಕರ ಬಾಳಿಗೆ ಕೊರೋನಾ ಹಾವಳಿಯು ಕರಿನೆರಳಿನಂತೆ ಆವರಿಸಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಘಟನೆಯು ಸದಾ ನಿಮ್ಮ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ ಎಂದು ರಾಜ್ಯ ಚಾಲಕರ ಟ್ರೇಡ್ ಯೂನಿಯನ್ ನ ಗೌರವಾಧ್ಯಕ್ಷರಾದ ಕೆ.ಎಚ್.ಪದ್ಮರಾಜ್ ಜೈನ್ ತಿಳಿಸಿದರು.
ನಗರದಲ್ಲಿ ಸೋಮವಾರ ಕಾರು ಚಾಲಕರು ಹಾಗೂ ತುರ್ತು ಆರೋಗ್ಯ ಸೇವೆಗಾಗಿ ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಮಾಡುತ್ತಿರುವ ಚಾಲಕರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಹಾಗೂ ಮಾಸ್ಕ್, ಸ್ಯಾನಿಟರೈಸ್ ಸೇರಿದಂತೆ ಇತರ ಸುರಕ್ಷತಾ ಪರಿಕರಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಇಡೀ ಜಗತ್ತು ಕೊರೋನಾ ಸೋಂಕಿನ ಹಾವಳಿಯಿಂದ ತಲ್ಲಣಗೊಂಡಿದೆ. ಒಂದೆಡೆ ದೊಡ್ಡ ದೊಡ್ಡ ಉಧ್ಯಮಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದರೆ ಮತ್ತೊಂದೆಡೆ ಬಡ ಹಾಗೂ ಕಾರ್ಮಿಕ ವರ್ಗದ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಚಿಂತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಅರಿತು ಕಾರ್ಯನಿರ್ವಹಿಸುತ್ತಿದ್ದ ಚಾಲಕರು ಲಾಕ್ ಡೌನ್ ಪರಿಣಾಮವಾಗಿ ರಸ್ತೆಗಿಳಿಯದಂತೆ ಮನೆಯಲ್ಲೆ ಇದ್ದು ಸಂಸಾರ ನಡೆಸಲು ಸಾಧ್ಯವಾಗದೆ ದುಡಿಮೆಗೆ ಪರ್ಯಾಯ ಮಾರ್ಗದತ್ತ ಮುಖ ಮಾಡಿದ್ದಾರೆ.
ಸರ್ಕಾರವು ಚಾಲಕರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಯಾವುದೇ ಯೋಜನೆ ನೀಡದೆ ಅವೈಜ್ಞಾನಿಕವಾಗಿ ಪ್ಯಾಕೇಜ್ ನೀಡಿರುವುದು ಸರಿಯಲ್ಲ. ತಾಲ್ಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಸಂಘಟನೆಯ ವತಿಯಿಂದ ದಿನದ ೨೪ ಗಂಟೆಗಳ ಕಾಲ ಉಚಿತ ಆಂಬ್ಯುಲೆನ್ಸ್ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕರ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಮಾನವೀಯತೆ ಮೆರೆದಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಇವರ ಸೇವೆಯಿಂದ ನೂರಾರು ಸೋಂಕಿತರು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಸಂಘಟನೆಯು ಎಂತಹ ಸಂದಿಗ್ಧ ಪರಿಸ್ಥಿಯಲ್ಲೂ ಚಾಲಕರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಚಾಲಕರ ಟ್ರೇಡ್ ಯೂನಿಯನ್ ನ ಜಿಲ್ಲಾ ಘಟಕದ ಅಧ್ಯಕ್ಷರಾದ ಛತ್ರಂ ಶ್ರೀಧರ್ ಮಾತನಾಡಿ, ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಚಾಲಕರು ತಮ್ಮ ಭವಿಷ್ಯದ ಕನಸುಗಳನ್ನೇ ಮರೆತಿದ್ದರು. ನಮ್ಮ ವೃತ್ತಿ ಬದುಕು ಮುಗಿದಿದೆ ಎನ್ನುವಂತಹ ಪರಿಸ್ಥಿತಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಕೆ.ಎಚ್.ಪದ್ಮರಾಜ್ ಜೈನ್ ರವರು ಚಾಲಕರ ಕುಟುಂಬಗಳು ಆಸರೆಯಾಗುವ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದು, ಅವರ ಈ ಸತ್ಕಾರ್ಯಕ್ಕೆ ಚಾಲಕರು ಸದಾ ಋಣಿಯಾಗಿರುತ್ತಾರೆ ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ಸುನಿಲ್, ಕೆ.ವಿ.ಪ್ರಸನ್ನ ಕುಮಾರ್, ಪ್ರತಾಪ್, ಗೋಪಾಲಕೃಷ್ಣ, ರಂಜಿತ್, ಗಿರೀಶ್, ರಾಜು, ವಿನಯ್, ರಾಜಶೇಖರ್, ನವೀನ್ ಇತರರು ಭಾಗವಹಿಸಿದ್ದರು.