ಚಾಲಕರಿಗೆ ‘ಕೊರೊನಾ ಪ್ಯಾಕೇಜ್’ ಅರ್ಜಿ ನೋಂದಣಿಗೆ ಚಾಲನೆ


ಪುತ್ತೂರು, ಮೇ ೩೧- ಕೊರೊನಾ ನಿರ್ಮೂಲನೆ ಮತ್ತು ಜನರ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಪಕ್ಷಾತೀತವಾಗಿ ಜನರ ಸೇವೆ ನಿರಂತರವಾಗಿ ನಡೆಯಲಿದೆ. ರಾಜಕೀಯ ಮಾಡುವವರು ಮಾಡುತ್ತಲೇ ಇರಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆಟೋ ರಿಕ್ಷಾ, ಕ್ಯಾಬ್, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ರಾಜ್ಯ ಸರ್ಕಾರದ ಕೊರೊನಾ ಪ್ಯಾಕೇಜ್ ಪಡೆಯಲು ನೋಂದಣಿ ಕಾರ್ಯಕ್ರಮಕ್ಕೆ ಭಾನುವಾರ ಬಿಜೆಪಿ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಿದರು.
ಸಮಾಜದಲ್ಲಿ ಸಂಕಷ್ಟ ಪಡುತ್ತಿರುವ ಮಂದಿಗಳಿಗೆ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಇದನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಆಪ್‌ನ್ನು ಪ್ರಾರಂಭಿಸಲಾಗಿದೆ. ಚಾಲಕರು ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನೋಂದಾಯಿಸಿಕೊಳ್ಳಬಹುದು. ಶಾಸಕರ ವಾರ್‌ರೂಂನಲ್ಲಿ ನೋಂದಾವಣೆಗೆ ಅವಕಾಶವಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ ಅವರು ಮಾತನಾಡಿ, ಕೊರೊನಾವನ್ನು ಯಶಸ್ವಿಯಾಗಿ ನಿಯಂತ್ರಿಸುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಕಾರ್ಯಕರ್ತರ ಮನೆಯಲ್ಲಿಯೇ ತೊಂದರೆಗಳನ್ನು ಎದುರಿಸುತ್ತಿದ್ದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಸಂಘಟನೆ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ದೇಶದಾದ್ಯಂತ ಸೇವಾಹಿ ಸಂಘಟನೆಯು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಗುರುದತ್ ಜಿ.ನಾಯಕ್ ಮಾತನಾಡಿದರು.
ಮಿನಿ ವಿಧಾನ ಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಏಳು ದಿನಗಳ ಕಾಲ ನೋಂದಣಿ ನಡೆಯಲಿದ್ದು ಬೆಳಿಗ್ಗೆ ೮.೩೦ರಿಂದ ಸಂಜೆ ೫ರ ತನಕ ನೋಂದಣಿಗೆ ಅವಕಾಶವಿದೆ. ಚಾಲಕರು ತಮ್ಮ ವಾಹನದ ದಾಖಲೆ, ಡ್ರೈವಿಂಗ್ ಲೈಸನ್ಸ್, ಬ್ಯಾಜ್, ಆಧಾರ್ ಕಾರ್ಡ್ ಮೊದಲಾದ ದಾಖಲೆಯೊಂದಿಗೆ ಆಗಮಿಸಿ ನೋಂದಾಯಿಸಿಕೊಳ್ಳುವಂತೆ ಮಾಹಿತಿ ನೀಡಲಾಯಿತು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್‌ಗಣೇಶ್ ಕಾಮತ್ ಸ್ವಾಗತಿಸಿ, ಯುವ ಮೋರ್ಚಾ ನಗರ ಮಂಡಲದ ಅಧ್ಯಕ್ಷ ಸಚಿನ್ ಶೆಣೈ ವಂದಿಸಿದರು.