ಚಾಲಕನ ಸಮಯ ಪ್ರಜ್ಞೆ ತಪ್ಪಿದ ದುರಂತ

ತುಮಕೂರು, ಜು. ೨೫- ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಆಕ್ಸೆಲ್ ಬ್ಲೇಡ್ ತುಂಡಾಗಿ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಚಾಲಕ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಜಿಲ್ಲೆಯ ಸಿರಾ ನಗರದ ಕಲ್ಲುಕೋಟೆ ಬಳಿ ಚಲಿಸುತ್ತಿದ್ದ ಬಸ್‌ನ ಆಕ್ಸಲ್ ಬ್ಲೇಡ್ ತುಂಡಾಗಿ ರಸ್ತೆ ಬದಿಯ ಸೇತುವೆಗೆ ಅಪ್ಪಳಿಸಿದೆ. ಈ ವೇಳೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.
ಸಿರಾ ನಗರದಿಂದ ಪಟ್ಟನಾಯಕನಹಳ್ಳಿ ಕಡೆಗೆ ೪೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಕೆಎಸ್‌ಆರ್‌ಟಿಸಿ ಬಸ್ ಸಾಗುತ್ತಿತ್ತು. ಈ ವೇಳೆ ಬಸ್‌ನ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಸೇತುವೆಗೆ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಸ್ವಲ್ಪ ಮುಂದೆ ಸಾಗಿದ್ದರೆ ಸುಮಾರು ೨೦ ಅಡಿ ಆಳದ ಸೇತುವೆಯಿಂದ ಕೆಳಗೆ ಬಿದ್ದು ಭಾರೀ ಪ್ರಾಣ ಹಾನಿಯಾಗುವ ಸಂಭವವಿತ್ತು. ಆದರೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸೇತುವೆಗೆ ಡಿಕ್ಕಿ ಹೊಡೆದು ಅದು ಹಾಗೇ ನಿಂತಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.