ಚಾರ್‍ಮಿನಾರ್ ನಟಿಯಿಂದ ಯುವಜನೋತ್ಸವಕ್ಕೆ ಚಾಲನೆ


ಬಳ್ಳಾರಿ, ಅ.6- ಪ್ರತಿ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಚಾರ್‍ಮಿನಾರ್‍ನಂತೆ ನಾಲ್ಕು ಕಂಬಗಳಂತಿರುವ ತಂದೆ-ತಾಯಿ, ಸ್ನೇಹಿತರು, ಸಂಗಾತಿ ಮತ್ತು ಶಿಕ್ಷಕರು ಅತ್ಯವಶ್ಯಕವಾಗಿರುತ್ತಾರೆ ಎಂದು ಕನ್ನಡ ಚಲನಚಿತ್ರ ಖ್ಯಾತ ನಟಿ ಹಾಗೂ ಫಿಲಂಫೇರ್ ಪ್ರಶಸ್ತಿ ಪುರಸ್ಕೃತರಾದ ಮೇಘನಾ ಗಾಂವ್ಕರ್ ಹೇಳಿದರು.
ಅವರು ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ‘ಸಾಂಸ್ಕೃತಿಕ ವೈಭವ-ಯುವಜನೋತ್ಸವ 2022’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಹಲವಾರು ಮಜಲುಗಳನ್ನು ದಾಟಿ ಗುರಿ ಮುಟ್ಟಬೇಕಾಗುತ್ತದೆ. ಸೋಲು- ಗೆಲುವು ಸಾಮಾನ್ಯ, ಇನ್ನೊಬ್ಬರಿಂದ ಅಪೇಕ್ಷೆಯನ್ನು ನಿರೀಕ್ಷಿಸದೆ ನಿಮ್ಮ ಜೀವನ ನೀವೇ ರೂಪಿಸಿಕೊಳ್ಳಲು ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ವಿಶ್ವವಿದ್ಯಾಲಯದ ಎಲ್ಲ ಸಿಂಡಿಕೇಟ್ ಸದಸ್ಯರ ಪರವಾಗಿ ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಪ್ರತಿಭೆಯನ್ನು ಹೊರತರಲು ಇಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ನೆರವಾಗಲಿವೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸೂಕ್ತ ವೇದಿಕೆಯಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ. ಆಲಗೂರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುವುದು ನಮ್ಮ ದೇಶದ ಸಂಪ್ರದಾಯವಾಗಿದೆ. ಪಠ್ಯಪುಸ್ತಕದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಭೌತಿಕವಾಗಿಯೂ ಮತ್ತು ಮಾನಸಿಕವಾಗಿಯೂ ಸದೃಢರನ್ನಾಗಿ ಮಾಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ2020 ರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಮಹತ್ವ ನೀಡಲಾಗಿದ್ದು, ಪಠ್ಯದ ಭಾಗವಾಗಿ ಸಾಂಸ್ಕೃತಿಕ ಅಧ್ಯಯನವನ್ನು ಪರಿಚಯಿಸಲು ಉನ್ನತ ಮಟ್ಟದ ಚಿಂತನೆ ನಡೆದಿದೆ ಮತ್ತು ಆದಷ್ಟು ಬೇಗನೆ ಇದನ್ನು ಜಾರಿಗೊಳಿಸಲು ಸರ್ಕಾರವು ಸಿದ್ಧತೆ ನಡೆಸಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸುವುದರಿಂದ ಸಹಸ್ಪರ್ಧಿ ಕಲಾವಿದರ ಅನುಭವಗಳನ್ನು ನೋಡಿ ಹೆಚ್ಚಿನ ಕಲೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕಲ್ಯಾಣ-ಕರ್ನಾಟಕ ಭಾಗದಿಂದ ಚಿತ್ರರಂಗಕ್ಕೆ ನಟಿಯರಾಗಿ ಪಾದಾರ್ಪಣೆ ಮಾಡಿರುವವರು ಅತಿ ವಿರಳ. ಇದೀಗ ತಮ್ಮ ನಟನೆ ಮೂಲಕ ಮನೆಮಾತಾಗಿರುವ ಮೇಘನಾ ಗಾಂವ್ಕರ್ ಅವರು ಚಿತ್ರರಂಗದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಕುಲಪತಿಗಳು ಶುಭ ಹಾರೈಸಿದರು.
ಯುವಜನೋತ್ಸವ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶಾಂತನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಯುವಜನೋತ್ಸವದ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳಿಗಾಗಿ 30 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಮುಖ್ಯ ಆವರಣ ಸೇರಿದಂತೆ ಸ್ನಾತಕೋತ್ತರ ಕೇಂದ್ರಗಳು ಹಾಗೂ 50ಕ್ಕೂ ಅಧಿಕ ಸಂಯೋಜಿತ ಕಾಲೇಜುಗಳ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಮಿಸಿದ್ದ ಚಿತ್ರನಟಿ ಮೇಘನಾ ಗಾಂವ್ಕರ್ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್. ಸಿ. ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ ಓಲೇಕಾರ ವಂದಿಸಿದರು. ವಿತ್ತಾಧಿಕಾರಿ ಡಾ. ಕೆ ಸಿ ಪ್ರಶಾಂತ್, ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಎಲ್ಲಾ ಸಿಂಡಿಕೇಟ್ ಸದಸ್ಯರು ಹಾಗೂ ನಟಿ ಮೇಘನಾ ಗಾಂವ್ಕರ್ ಅವರ ತಂದೆ-ತಾಯಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ. ಸುಷ್ಮಾ ಜೋಗನ್ ನಿರೂಪಿಸಿದರು. ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.