ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಮತ್ತೆ ನಿರ್ಬಂಧ!


ಚಿಕ್ಕಮಗಳೂರು, ಮಾ.೧೯- ಚಾರ್ಮಾಡಿ ಘಾಟ್ ಹೆದ್ದಾರಿಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿ ಬುಧವಾರ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ಗುರುವಾರ ಹಿಂಪಡೆದಿದ್ದಾರೆ.
ಅತಿವೃಷ್ಟಿಯಿಂದ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಭಾರೀ ಭೂಕುಸಿತವಾಗಿತ್ತು. ಪರಿಣಾಮ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕ್ಕಮಗಳೂರಿನಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಯತ್ತ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಚಾರ್ಮಾಡಿ ಘಾಟ್‌ನ ಹೆದ್ದಾರಿಯಲ್ಲಿ ಕೈಗೊಳ್ಳಲಾಗಿದ್ದ ರಸ್ತೆ ದುರಸ್ತಿ ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬುಧವಾರ ಈ ರಸ್ತೆಯಲ್ಲಿ ೬ ಚಕ್ರಕ್ಕೂ ಹೆಚ್ಚು ಚಕ್ರಗಳ ವಾಹನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿ ಆದೇಶದಿಂದಾಗಿ ಜಿಲ್ಲೆಯ ಸಾರ್ವಜನಿಕರು ಭಾರೀ ಸಂತಸ ವ್ಯಕ್ತಪಡಿಸಿದ್ದರು. ಆದೇಶದ ಬಳಿಕ ಕೆಲ ಸಾರಿಗೆ ವಾಹನಗಳು ಸೇರಿದಂತೆ ಅನೇಕ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯತ್ತ ಪ್ರಯಾಣ ಬೆಳೆಸಿದ್ದರು. ಆದರೆ ಈ ಆದೇಶ ಹೊರಡಿಸಿ ಒಂದು ದಿನ ಕಳೆಯುತ್ತಿದ್ದಂತೆ ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ಹಿಂಪಡೆದಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ನಿರಾಶೆ ಆವರಿಸಿದೆ. ಚಾರ್ಮಾಡಿ ಘಾಟ್‌ನ ಹೆದ್ದಾರಿಯಲ್ಲಿನ ರಸ್ತೆ ಕಾಮಗಾರಿ ಪೈಕಿ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೊಳಪಡುವ ರಸ್ತೆಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟನ್ ರಸ್ತೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಿಳಿದು ಬಂದಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನೀಡಿದ ಮಾಹಿತಿ ಮೇರೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ಅವರು ಗುರುವಾರ ಚಾರ್ಮಾಡಿ ಘಾಟ್ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ಆದೇಶವನ್ನು ಹಿಂಪಡೆದಿದ್ದಾರೆಂದು ತಿಳಿದು ಬಂದಿದೆ.