
ವಾಡಿ: ಮಾ.18: ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಕ್ಕಳೇ ಶಿಕ್ಷಕರಾಗಿ ಒಂದು ದಿನದ ಶಾಲಾ ಆಡಳಿತ ನಡೆಸಿದ ಬಲು ಅಪರೂಪದ ಪ್ರಯೋಗ ಮತ್ತು ವಿಶಿಷ್ಟ ಉಡುಗೆಯೊಂದಿಗೆ ಮಕ್ಕಳ ರ್ಯಾಂಪ್ ವಾಕ್ ನಡೆಯಿತು.
ರಾವೂರಿನ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ ಮಕ್ಕಳಲ್ಲಿ ಆಡಳಿತ ಹಾಗೂ ಬೋಧನಾ ಕೌಶಲ್ಯ ಬೆಳೆಸಲು ಹಮ್ಮಿಕೊಂಡಿದ್ದ ಈ ವಿಶಿಷ್ಟ ಪ್ರಯೋಗದಲ್ಲಿ ನಾವು ಯಾರಿಗೇನು ಕಡಿಮೆಯಿಲ್ಲ ಎನ್ನುವಷ್ಟರ ಮಟ್ಟಿಗೆ ವಿದ್ಯಾರ್ಥಿನಿಯರು ತುಂಬಾ ಅಚ್ಚುಕಟ್ಟಾಗಿ ಹಾಗೂ ಸಮರ್ಥವಾಗಿ ತರಗತಿಗಳನ್ನು ನಿರ್ವಹಿಸಿದ ರೀತಿ ಎಲ್ಲರನ್ನು ಬೆರಗುಗೊಳಿಸುವಂತಿತ್ತು.
ವಿದ್ಯಾರ್ಥಿನಿಯರ ನಾಯಕಿಯಾಗಿ ಆಯ್ಕೆಯದ ನಾಗವೇಣಿ ತಂದೆ ಶಿವರಾಜರೆಡ್ಡಿ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸಿದಳು. ಅವರಿಗಾಗಿಯೇ ನಿಗದಿಪಡಿಸಲಾದ ವೇಳಾ ಪಟ್ಟಿಯ ಪ್ರಕಾರ ವಿಷಯವಾರು ವಿದ್ಯಾರ್ಥಿನಿ ಶಿಕ್ಷಕಿಯರು ತಾವು ತಯ್ಯಾರು ಮಾಡಿಕೊಂಡು ಬಂದಿದ್ದ ಪಾಠದ ಟಿಪ್ಪಣಿಯನ್ನು ತರಗತಿಗೆ ತೆಗೆದುಕೊಂಡು ಹೋಗಿ ನಿರ್ಬಿತಿಯಿಂದ ಪಾಠ ಮಾಡಿದರು.
ಎಲ್ಲಾ ವಿಷಯಗಳಲ್ಲಿ ಮಕ್ಕಳು ತಮ್ಮದೆಯಾದ ಪಾಠಕ್ಕೆ ಸಂಬಂದಿಸಿದ ಚಾರ್ಟ, ಮಾಡಲ್ ಗಳನ್ನು ತಯ್ಯಾರಿಸಿಕೊಂಡು ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪಾಠ ಮಾಡುವ ರೀತಿಯಲ್ಲಿ ಆಕರ್ಷಕ ಬೋಧನೆ ಮಾಡಿದರು. ಕೆಲವು ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರು ಯಾವ ಶೈಲಿಯನ್ನು ಅನುಸರಿಸಿ ಪಾಠ ಮಾಡಿದ್ದು ಎಲ್ಲರನ್ನು ನಗೆಗಡಲಲ್ಲಿ ತೆಲಿಸುವಂತೆ ಮಾಡಿದರು. ಗಣಿತ, ವಿಜ್ಞಾನ, ಸಮಾಜ ವಿಷಯಗಳನ್ನು ಪ್ರಯೋಗಗಳ ಮೂಲಕ ಪ್ರಾತ್ಯಕ್ಷಿಕವಾಗಿ ಎಲ್ಲರ ಮನಮುಟ್ಟುವಂತೆ ಬೋಧಿಸಿದರು.
ಮಕ್ಕಳಲ್ಲಿ ಈ ಹಂತದಿಂದಲೆ ವೇದಿಕೆ ಮೇಲೆ ಹೋಗಿ ಮಕ್ಕಳು ಪಾಠ ಮಾಡುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಹಾಗೂ ಶಾಲಾ ಆಡಳಿತನ್ನು ಹೇಗೆ ನಿರ್ವಹಿಸಬೇಕೆಂಬ ಜ್ಞಾನ ನೀಡುವ ಒಂದು ಪ್ರಯತ್ನ ಶಿಕ್ಷಕರಿಂದ ನಡೆಯಿತು. ಅದಕ್ಕೆ ಮಕ್ಕಳು ಕೂಡಾ ಹೆಚ್ಚಿನ ಆಸಕ್ತಿಯಿಂದ ಸ್ಪಂದಿಸಿದ್ದು ಆಡಳಿತ ಪ್ರಯೋಗ ಯಶಸ್ವಿಯಾಗಲು ಕಾರಣವಾಯಿತು.
ಮುಖ್ಯಗುರು ವಿಧ್ಯಾಧರ ಖಂಡಾಳ, ಈಶ್ವರಗೌಡ ಪಾಟೀಲ, ಸಿದ್ಧಲಿಂಗ ಬಾಳಿ, ಶಿವಕುಮಾರ ಸರಡಗಿ, ಸುಗುಣಾ ಕೋಳ್ಕೂರ, ಭುವನೇಶ್ವರಿ ಎಂ, ರಾಧಾ ರಾಠೋಡ, ಜ್ಯೋತಿ ತೆಗನೂರ, ಮಂಜುಳಾ ಪಾಟೀಲ, ಸೋಮಶೇಖರ ಬಾಳಿ ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂದಿಸಿದಂತೆ ಮಕ್ಕಳನ್ನು ಆಯ್ದುಕೊಂದು ವಾರಗಳ ಕಾಲ ತರಬೇತಿ ನೀಡಿ ಅವರನ್ನು ತಯ್ಯಾರು ಮಾಡಿದರು,
ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅವರಲ್ಲಿ ಪಾಠ ಬೋಧನೆ ಕೌಶಲ್ಯ ಹಾಗೂ ಆಡಳಿತ ನಿರ್ವಹಣಾ ಸಾಮಾಥ್ರ್ಯ ಬೆಳೆಸಲು ಹಮ್ಮಿಕೊಂಡ ಒಂದು ದಿನದ ಶಾಲಾ ಆಡಳಿತ ಉತ್ತಮ. ಪೂಜ್ಯರು, ಶಾಲಾ ಆಡಳಿತ ಮಂಡಳಿ,ಶಿಕ್ಷಕರು ಹಾಗೂ ಮಕ್ಕಳ ಸಹಕಾರದಿಂದ ಈ ಶಾಲೆಯಲ್ಲಿ ವಿಶಿಷ್ಟ ಪ್ರಯೋಗಗಳು ನಡೆಯುತ್ತಿವೆ.
ಮಲ್ಲಿಕಾರ್ಜುನ ಸೇಡಂ ಬಿಆರ್‍ಸಿ.
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಒಂದು ದಿನದ ಶಾಲಾ ಆಡಳಿತದಲ್ಲಿ ವಿಧ್ಯಾರ್ಥಿನಿಯರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ತುಂಬಾ ಖುಷಿ ನೀಡಿತು, ನಮ್ಮ ಶಿಕ್ಷಕರ ಕ್ರೀಯಾಶೀಲತೆ ಮೆಚ್ಚಬೇಕು. ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಮಕ್ಕಳಿಂದ ರ್ಯಾಂಪ್ ವಾಕ್ ನಡೆದದ್ದು ಹೆಮ್ಮೆಯ ವಿಷಯ.
ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಸಂಸ್ಥಾನ ಮಠ