ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ

ಬೆಂಗಳೂರು,ಮಾ.೨೩:ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (೭೫) ಅವರು ವಿಧಿವಶರಾಗಿದ್ದಾರೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಸ್ವಸ್ತಿಶ್ರೀ ಚಾರುಕೀರ್ತಿ ಎಂಬ ಬಿರುದಾಂಕಿತ ಜೈನ ಭಟ್ಟಾರಕ ಸ್ವಾಮೀಜಿ ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಮಠಕ್ಕೆ ತರಲಾಗಿದ್ದು, ಮಠದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.ಶ್ರವಣಬೆಳಗೊಳದ ಜೈನ ಮಠದ ಸ್ವಾಮೀಜಿಯಾಗಿ ಅಪಾರ ಭಕ್ತರನ್ನು ಒಳಗೊಂಡಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿರವರ ಅಂತಿಮ ವಿಧಿವಿಧಾನಗಳ ದಿಗಂಬರ ಜೈನ ಸಂಪ್ರದಾಯದಂತೆ ನಡೆಯಲಿದ್ದು, ಅವರ ಶಿಷ್ಯರಾದ ಒಂಬುಜಮಠ, ಕನಕಗಿರಿ ಕ್ಷೇತ್ರ, ಸೊಂದಾಕ್ಷೇತ್ರ, ಕಂಬದಳ್ಳಿ ಕ್ಷೇತ್ರ, ಮೂಡಬಿದಿರೆ ಜೈನಮಠ, ಕಾರ್ಕಳ ಜೈನ ಮಠಾಧಿಪತಿಗಳು ಶ್ರವಣಬೆಳಗೊಳಕ್ಕೆ ಬಂದ ನಂತರ ಅಂತಿಮ ವಿಧಿವಿಧಾನದ ಸಮಯ ನಿಗದಿಪಡಿಸಲಾಗುತ್ತದೆ.
ಶ್ರೀಗಳ ಪರಿಚಯ
ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಮಠಾಧಿಪತಿಗಳಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿರವರು ೧೯೪೯ರ ಮೇ ೩ ರಂದು ಜನಿಸಿದ್ದರು. ೨೦ನೇ ವಯಸ್ಸಿನಲ್ಲೇ ಅಂದರೆ ೧೯೭೦ರಲ್ಲಿ ಧರ್ಮಾಚಾರ್ಯ ಪೀಠವನ್ನು ಅಲಂಕರಿಸಿದ್ದರು. ಅವರ ಹುಟ್ಟೂರು ಕಾರ್ಕಳ ತಾಲ್ಲೂಕಿನ ವರಂಗ, ಅವರ ಪೂರ್ವಾಶ್ರಮದ ಹೆಸರು ರತ್ನಾಕರ,
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಇತಿಹಾಸ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂಎ ತತ್ವಶಾಸ್ತ್ರ, ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ಕನ್ನಡ, ಸಂಸ್ಕೃತ, ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು.
ಶ್ರವಣಬೆಳಗೊಳದಲ್ಲಿದ್ದುಕೊಂಡೇ ಮಠದ ಸಮಸ್ತ ಕಾರ್ಯನಿರ್ವಹಣೆಯೊಂದಿಗೆ ಗೊಮ್ಮಟೇಶ್ವರ ಮೂರ್ತಿಯ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ೧೯೮೧ರಲ್ಲಿ ಗೊಮ್ಮಟೇಶ್ವರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಆಗ ಅಂದಿನ ಪ್ರಧಾನಿ ಇಂದಿಗಾರಾಂಧಿ ಅವರಿಂದ ಕರ್ಮಯೋಗಿ ಎಂಬ ಬಿರುದು ನೀಡಿ ಗೌರವಿಸಿದ್ದರು.೧೯೮೧, ೧೯೯೩, ೨೦೦೬, ೨೦೧೮ರಲ್ಲಿ ಸಹ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ್ದರು. ಸ್ವಾಮೀಜಿಗಳು ೪೦ಕ್ಕೂ ಹೆಚ್ಚು ಜಿನಾಲಯಗಳನ್ನೂ ಜೀರ್ಣೋದ್ಧಾರಗೊಳಿಸಿದರು. ಶ್ರವಣಬೆಳಗೊಳದ ಸುತ್ತಲಿನ ೧೦ಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನೂ ಮಠದಿಂದ ಸ್ಥಾಪಿಸಿದ್ದರು. ಪ್ರಾಕೃತ ಭಾಷೆಯ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್ ಸ್ಥಾಪಿಸಿದ್ದರು. ಸಂಚಾರಿ ಆಸ್ಪತ್ರೆ, ಆರ್ಯುವೇದಿಕ್ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಶ್ರವಣಬೆಳಗೊಳದಲ್ಲಿ ನಿರ್ಮಿಸಿದ್ದರು.ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ-ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಹಾಗೂ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದ ಯೋಜನೆಗಳನ್ನು ಸ್ವಾಮೀಜಿಗಳು ರೂಪಿಸಿದ್ದರು.

ಸ್ವಾಮೀಜಿಗಳ ಸಂತಾಪ
ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಧನಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗೆಯ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಶೋಕ ವ್ಯಕ್ತಪಡಿಸಿ ಅವರ ನಿಧನದಿಂದ ನಾಡಿಗಷ್ಟೇ ಅಲ್ಲ, ಅಧ್ಯಾತ್ಮಕ ಲೋಕಕ್ಕೂ ಭರಸಲಾಗದ ನಷ್ಟ ಉಂಟಾಗಿದೆ. ಭಗವಂತನು ಅವರ ನಿಧನದಿಂದ ದುಃಖಿತರಾಗಿರುವ ಭಕ್ತವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ಗಣ್ಯರ ಸಂತಾಪ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಹಲವು ಸಚಿವರು, ರಾಜಕೀಯ ನೇತಾರರು ದುಃಖ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.