ಚಾರಿತ್ರ್ಯದೊಂದಿಗೆ ಉನ್ನತ ಶಿಕ್ಷಣ ಪಡೆಯಿರಿ

ಭಾಲ್ಕಿ:ನ.21:ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಢಿಸಿಕೊಂಡು ಉನ್ನತ ಶಿಕ್ಷಣದೊಂದಿಗೆ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಯುವ ಮುಖಂಡ ಪ್ರಸನ್ನ ಖಂಡ್ರೆ ಹೇಳಿದರು.
ಇಲ್ಲಿನ ಶ್ರೀ ಗುರು ಪ್ರಸನ್ನ ಪದವಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಿ.ಕಾಮ್.,ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನ ಏಕೈಕ ಮಂತ್ರ ಪರಿಶ್ರಮ.ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾಭಕ್ತಿಯನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ.ಪೂ ಕಾಲೇಜಿನ ಉಪನ್ಯಾಸಕಿ ಶೀತಲ ವಾಡೇಕರ ಮಾತನಾಡಿ,ನಮ್ಮ ಕಾಲೇಜಿನಿಂದ ಶಿಕ್ಷಣ ಪಡೆದು ಹೊರಹೊಮ್ಮಿದ ಅನೇಕ ವಿದ್ಯಾರ್ಥಿಗಳು ಹಲವಾರು ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಕಾಲೇಜಿನ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಾಲರಾಜ ಶಿವಂಗೆ, ಪಿಯು ಕಾಲೇಜಿನ ಪ್ರಾಚಾರ್ಯ ರಾಜಕುಮಾರ ಮೇತ್ರೆ,ಐಟಿಐ ಪ್ರಾಚಾರ್ಯ ಸತೀಶ ಬಿರಾದಾರ, ಮುಖ್ಯಗುರು ಅಮೃತ ಮೇತ್ರೆ, ಉಪನ್ಯಾಸಕ ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಚಾರ್ಯ ವಿಷ್ಣುವರ್ಧನ ಕೋಟೆ ಸ್ವಾಗತಿಸಿದರು.ಕು.ರೂಬಿನಾ ನಿರೂಪಿಸಿದರು.ಉಪನ್ಯಾಸಕಿ ಸಂಗೀತಾ ಬಿರಾದಾರ ವಂದಿಸಿದರು.