ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ 10 ಗ್ರಾಮ ಪಂಚಾಯತ್ ಮೇಲ್ದರ್ಜೆಗೆ

ಮೈಸೂರು,ಜ.06:- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಂತಿರುವ 10 ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಮೇಲ್ದರ್ಜೆಗೇರಿಸಿ 01 ನಗರಸಭೆ (ಹೂಟಗಳ್ಳಿ ನಗರಸಭೆ), 4 ಪಟ್ಟಣ ಪಂಚಾಯತ್ ಗಳನ್ನು (ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ) ರಚಿಸಲಾಗಿದ್ದು,1/4/2021ರಂದು ಕರ್ನಾಟಕ ರಾಜ್ಯ ಲೆಕ್ಕಪತ್ರದಲ್ಲಿ ಅಂತಿಮ ಸೂಚನೆ ಹೊರಡಿಸಲಾಗಿದ್ದು 1/8/2021ರಿಂದ ಅದಿಕೃತವಾಗಿ ನಗರ ಸ್ಥಳೀಯ ಸಂಸ್ಥೆಗಳು (ನಗರಸಭೆ ಮತ್ತು ಪಟ್ಟಣ ಪಂಚಾಯತ್) ಕಾರ್ಯ ಆರಂಭಿಸಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಇಂದು ಜಲದರ್ಶಿನಿ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಗ್ರಾ.ಪಂಗಳು ನಗರ ಸ್ಥಳೀಯ ಸಂಸದಥೆಗಳಾಗಿ ಮೇಲ್ದರ್ಜೆಗೇರಿದ ನಂತರ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 203 ಕೋಟಿ ಅನುದಾನ ಮಂಜೂರಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಸತಿ ಯೋಜನೆಯಡಿ 550 ಮನೆಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಈಗಾಗಲೇ ಮನೆಗಳು ನಿರ್ಮಾಣ ಹಂತದಲ್ಲಿವೆ. ಸ್ವಚ್ಛತೆಗಾಗಿ ಮನೆಮನೆ ಕಸ ಸಂಗ್ರಹಣೆಗಾಗಿ 39 ಆಟೋ ಟಿಪ್ಪರ್ ಗಳು, 8ಟ್ಯಾಕ್ಟರ್, 2ಜೆಸಿಬಿ, 2ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛತೆ, ಒಳಚರಂಡಿ ನಿರ್ವಹಣೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಿಂದೆ ಮೇಲ್ದರ್ಜೆಗೇರಿಸಿದ ಗ್ರಾ.ಪಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾರ್ಗಸೂಚಿಯಂತೆ ಕ್ರಮಬದ್ಧ ಆಸ್ತಿ (9,11ಎ) ಕ್ರಮಬದ್ಧವಲ್ಲದ (9,11ಬಿ) ಎಂದು ವರ್ಗೀಕರಿಸಿ ಖಾತಾಗಳನ್ನು ವಿತರಿಸಲಾಗುತ್ತಿದ್ದು ಆದರೆ ನಗರ ಸಭೆ ಪ.ಪಂಗಳು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬಂದಿದ್ದು ನಗರ ಪ್ರದೇಶಗಳಲ್ಲಿ ಕ್ರಮಬದ್ಧವಾಗಿ ಬೆಳವಣಿಗೆಯಾಗಬೇಕಾಗಿರುವುದರಿಂದ ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಯಲ್ಲಿ ಜಮೀನು ಪರಿವರ್ತನೆಯಾಗಿ ಬಡಾವಣೆ ಅನುಮೋದನೆಯಾದ ನಂತರ ಎಲ್ಲಾ ಮೂಲಭೂತ ಸೌಲಭ್ಯಗಳನ್ನು(ರಸ್ತೆ, ಚರಂಡಿ, ಒಳಚರಂಡಿ, ನೀರು ಸರಬರಾಜು, ಬೀದಿ ದೀಪ, ಪಾರ್ಕ್ ಅಭಿವೃದ್ಧಿ) ಕಲ್ಪಿಸಿದ್ದರೆ ಮಾತ್ರ ಖಾತಾ (ನಮೂನೆ3) ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಒಂದು ವೇಳೆ ಭೂ ಪರಿವರ್ತನೆಯಾಗಿ ಬಡಾವಣೆ ಅನುಮೋದನೆಯಾಗದೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿ ಸದಿದ್ದರೆ ಅಂತಹ ಬಡಾವಣೆಯನ್ನು ಅನಧಿಕೃತವೆಂದು ಪರಿಗಣಿಸಿ ಮೂಲಭೂತ ಸೌಲಭ್ಯಗಳನ್ನು ನಗರಸಭೆ ಮತ್ತು ಪ.ಪಂಗಳಿಂದ ಒದಗಿಸುತ್ತಿರುವುದರಿಂದ ದುಪ್ಪಟ್ಟು ತೆರಿಗೆಯನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು. ಇಂತಹ ಬಡಾವಣೆ ಆಸ್ತಿಗಳಿಗೆ (ನಮೂನೆ-3) ನೀಡಲು ಅವಕಾಶ ಇರಲಿಲ್ಲ.
ನಂತರ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರು, ನಮೂನೆ-3 (ಖಾತಾ) ಸಿಗದಿದ್ದರೆ, ನೊಂದಣಿಯಾಗುವುದಿಲ್ಲ, ಸಾಲ ಸೌಲಭ್ಯವಿಲ್ಲ, ಕಟ್ಟಡ ಕಟ್ಟಲು ನಕ್ಷೆ ಮತ್ತು ಪರವಾನಿಗೆ ದೊರೆಯದೆ, ಪರ ಭಾರೆ ಮಾಡಲು ಅವಕಾಶವಿಲ್ಲದೆ ಇರುವ ಬಗ್ಗೆ ನನಗೆ ಹಲವಾರು ಬಾರಿ ಈ ಸಮಸ್ಯೆಗಳ ನನ್ನ ಗಮನಕ್ಕೆ ತರಲಾಗಿ, ಇದರ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿಧಾನ ಸಭಾ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸುದೀರ್ಘವಾಗಿ ಚರ್ಚಿಸಿ, ?ಸರ್ಕಾರದ ಗಮನಕ್ಕೆ ತರಲಾಗಿ, ಸರ್ಕಾರವು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿ, ನಗರಾಭಿವೃದ್ಧಿ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಿ, ಪೌರಾಡಳಿತ ಸಚಿವರು, ಕಾನೂನು ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರನ್ನೊಳಗೊಂಡ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು ಎಂದರು.
ಸಚಿವ ಸಂಪುಟ ಉಪ ಸಮಿತಿಯು ಸಭೆಗಳನ್ನು ಮಾಡಿಸ್ಥಳ ಪರಿಶೀಲನೆ ನಡೆಸಿ, ಸಂಪುಟ ಸಭೆಯಲ್ಲಿ ಮಂಡಿಸಿ, ಅನಧಿಕೃತ ಆಸ್ತಿಗಳಿಗೆ ನಮೂದು ಮಾಡಲು ಕ್ರಮಕೈಗೊಂಡು 02-01-2023 ರಂದು ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅಧಿಕೃತ ಮತ್ತು ಅನಧಿಕೃತ ಎಂದು ವಿಂಗಡಿಸಿ ನಮೂನೆ-3 ನೀಡಲು ಆದೇಶ ಹೊರಡಿಸಲಾಗಿದೆ ಎಂದರು.
ಇದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ ವ್ಯಾಪ್ತಿಯ ಅಂದಾಜು 103 ಬಡಾವಣೆ / ಪ್ರದೇಶಗಳ ಅಂದಾಜು 54,000 ಆಸ್ತಿ ಮಾಲೀಕರುಗಳಿಗೆ ಅನುಕೂಲವಾಗಲಿದ್ದು, ಕ್ರಯ ವಿಕ್ರಯ ಮಾಡಲು, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ಖಾತಾ ಬದಲಾವಣೆ, ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಅನುಮೋದನೆ ಮತ್ತು ಪರವಾನಿಗೆ ಪಡೆಯಲು, ಇತರೆ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರಲ್ಲದೆ ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವರು, ನಗರಾಭಿವೃದ್ಧಿ ಸಚಿವರಿಗೆ, ಸಂಬಂಧ ಪಟ್ಟ ಇತರ ಇಲಾಖೆಗಳ ಸಚಿವರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಈ ಸೌಲಭ್ಯವನ್ನು ಇ-ಆಸ್ತಿ ತಂತ್ರಾಂಶದಲ್ಲಿ 20 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ 2023ರ ಫೆಬ್ರವರಿ ತಿಂಗಳಿಂದ ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಭೂ ಪರಿವರ್ತನೆಯಾಗಿ ಅನುಮೋದನೆಯಾಗಿರುವ ಬಡಾವಣೆಗಳು, ಗ್ರಾಮ ಠಾಣಾ ಆಸ್ತಿಗಳು, ಸರ್ಕಾರದಿಂದ ಮಂಜೂರಾದ ಆಸ್ತಿಗಳು (ಮುಡಾ, ಮುಡಾದಿಂದ ಅನುಮೋದನೆಗೊಂಡ ಖಾಸಗಿ ಬಡಾವಣೆಗಳು, ಆಶ್ರಯ, ಕೆ.ಹೆಚ್.ಬಿ., ಕೊಳಚೆ ಮಂಡಳಿ), ಕೆ.ಐ.ಎ.ಡಿ. ವತಿಯಿಂದ ವಸತಿ ಉದ್ದೇಶಕ್ಕೆ ಅನುಮೋದನೆಗೊಂಡ ಬಡಾವಣೆಗಳು ಅಧಿಕೃತ ಆಸ್ತಿಗಳಾಗಿದ್ದು, ಭೂ ಪರಿವರ್ತನೆ (ಅಲಿನೇಶನ ಅಥವಾ ಕನ್ವರ್ಷನ್) ಯಾದ ಆದರೆ ಸಕ್ಷಮ ಪ್ರಾಧಿಕಾರ (ಮೂಡ ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ) ದಿಂದ ಅನುಮೋದನೆಯಾಗದ ಬಡಾವಣೆಯ ಆಸ್ತಿಗಳು, ಗ್ರಾಮಪಂಚಾಯಿತಿಗಳು ಪೂರ್ಣ ಹಾಗೂ ಭಾಗಶಃ ಮೇಲ್ದರ್ಜೆಗೇರಿಸಿ, ಪಂಚಾಯಿತಿಯಿಂದ ನಿರ್ವಹಿಸಿ, ಹಸ್ತಾಂತರಿಸಿದ ಆಸ್ತಿಗಳು, ಕಟ್ಟಡ ಕಟ್ಟಲು ಪರವಾನಗಿ/ರಹದಾರಿ ಪಡೆಯದೆ ನಿರ್ಮಿಸಿದ ಕಟ್ಟಡಗಳು, ಸರ್ಕಾರಿ ನಿವೇಶನ / ಭೂಮಿಯನ್ನು ಹೊರತುಪಡಿಸಿ, ಅಧಿಕೃತ ಆಸ್ತಿಯ ಮಾಲೀಕತ್ವ ಇಲ್ಲದ ನಿವೇಶನ / ಕಟ್ಟಡ ಇವು ಅನಧಿಕೃತ ಆಸ್ತಿಗಳಾಗಿವೆ ಎಂದು ತಿಳಿಸಿದರು.
ಹೂಟಗಳ್ಳಿ ನಗರ ಸಭೆಯಲ್ಲಿ 17879, ಬೋಗಾದಿ ಪ.ಪಂನಲ್ಲಿ 16026,ಶ್ರೀರಾಂಪುರ ಪ.ಪಂನಲ್ಲಿ 6868, ರಮ್ಮನಹಳ್ಳಿ ಪ.ಪಂನಲ್ಲಿ 6660, ಕಡಕೊಳಪ.ಪಂನಲ್ಲಿ 6420 ಅನಧಿಕೃತ ಆಸ್ತಿಗಳಿವೆ ಎಂದು ವಿವರಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 203.00ಕೋಟಿ ವೆಚ್ಚದ ಅನುದಾನದ ಕಾಮಗಾರಿಗಳಲ್ಲಿ ಅಮೃತ್ 2.0(135.00ಕೋಟಿ) ಹೊರತುಪಡಿಸಿ ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.