ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರಿಗೌಡರೇ ಶಾಸಕರು

ಸಂಜೆವಾಣಿ ನ್ಯೂಸ್
ಮೈಸೂರು: ಮಾ.14:- ಚಾಮುಂಡೇಶ್ವರಿ ಕ್ಷೇತ್ರಕ್ಕೆ ಟಿಕೇಟ್ ಸಿಗದಿದ್ದರೂ ಸಹ ಮರಿಗೌಡರು ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಶೀಲ ನಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಮಹಾನಗರ ಪಾಲಿಕೆ 44, 45, 46 ಮತ್ತು 58ನೇ ವಾರ್ಡಿನವತಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಮರಿಗೌಡ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ತಬ್ಬಲಿಗಳಾಗಿಲ್ಲ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಮುಡಾ ಅಧ್ಯಕ್ಷ ಸ್ಥಾನವನ್ನು ಮರಿಗೌಡರಿಗೆ ನೀಡುವ ಮೂಲಕ ಕ್ಷೇತ್ರ ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದಾರೆ. ಕ್ಷೇತ್ರದಿಂದ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದಾರೆಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಮುಡಾ ಅಧ್ಯಕ್ಷ ಮರಿಗೌಡ ಮಾತನಾಡಿ, ನಾನು ಅಧ್ಯಕ್ಷನಾಗಲು ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು, ನಾಯಕರೆಲ್ಲರೂ ಕಾರಣರಾಗಿದ್ದಿರಿ. ಅದರಲ್ಲೂ ನಗರ ಪ್ರದೇಶದಲ್ಲಿ ಪಕ್ಷ. ಸಂಘಟಿಸುವುದು ಬಹಳ ಕಷ್ಟವಿದೆ. ಅಂತಹ ಕೆಲಸದಲ್ಲಿ ನನ್ನೊಟ್ಟಿಗೆ ನಿಂತ ನಿಮಗೆ ನನ್ನ ಈ ಸ್ಥಾನ ಅರ್ಪಿಸುವೆ ಎಂದರು.
ಪಕ್ಷ ಸಂಘಟನೆಗೆ ನನಗೆ ಸಂಪೂರ್ಣ ಮಾರ್ಗದರ್ಶನದಂತಿದ್ದವರು ದಿ.ದ್ರುವನಾರಾಯಣ್ ಅವರಾಗಿದ್ದರು. ದೊಡ್ಡ ನಿರೀಕ್ಷೆ ನನ್ನ ಮೇಲಿದೆ. ಸಿದ್ದರಾಮಯ್ಯ ಅವರು ನನಗೆ ಟಿಕೇಟ್ ಕೊಟ್ಟರೆ ಅವರ ಸಮುದಾಯದವರನಿಗೆ ಕೊಟ್ಟರೆಂಬ ಮಾತು ಬರುತ್ತದೆ. ಜಾತಿ ಸಮೀಕರಣದ ಲೆಕ್ಕಾಚಾರದಿಂದ ಒಕ್ಕಲಿಗರಿಗೆ ಕೊಡಬೇಕಾಗುತ್ತದೆ.ಅಲ್ಲದೆ ಸಿಎಂ ಆಗಿದ್ದಾಗಲೇ ನನ್ನನ್ನು ಸೋಲಿಸಿದವರು ನಿನ್ನನ್ನೂ ಸೋಲಿಸಿಬಿಡುತ್ತಾರೆ ಎಂದು ಹೇಳಿದ್ದರಿಂದ ನಾನು ಹಿಂದೆ ಸರಿದೆ. ಅಂದೆ ಮುಡಾ ಅಧಿಕಾರ ಕೊಡುವುದಾಗಿ ಕೊಟ್ಟ ಮಾತಿನಂತೆ ಅಧಿಕಾರ ಕೊಟ್ಟಿದ್ದಾರೆಂದು ಹೇಳಿದರು.