ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನ.25:- ಚಾಮುಂಡಿ ಬೆಟ್ಟವನ್ನು ಸಂರಕ್ಷಿಸಿ, ಭೂ ಕುಸಿತದಿಂದ ಉಳಿಸಿ ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಚಾಮುಂಡೇಶ್ವರಿ ಬೆಟ್ಟದಲ್ಲಿ ಪದೇ ಪದೇ ಭೂಕುಸಿತವಾಗುತ್ತಿದೆ. ಮೊದಲಿದ್ದ ಸರ್ಕಾರ ಹಾಗೂ ಕೆಲವು ರಾಜಕೀಯ ನಾಯಕರುಗಳು ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ನಾಶಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು, ಬಹುಮಹಡಿ ಪಾರ್ಕಿಂಗ್ ಕಾಮಗಾರಿಗಳನ್ನು ನಿರ್ಮಾಣ ಮಾಡಿ ಹಿಂದೆಂದೂ ಆಗದಂತಹ ಭೂ ಕುಸಿತಕ್ಕೆ ಕಾರಣವಾಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಚಾಮುಂಡಿಬೆಟ್ಟ ಕಾಂಕ್ರೀಟ್ ಕಾಡಾಗದಿರಲಿ. ವಾಣಿಜ್ಯ ಕೇಂದ್ರವಾಗದಿರಲಿ. ಜನರು ಇಲ್ಲಿಗೆ ಬರುವುದು ಆಧ್ಯಾತ್ಮ ಹಾಗೂ ಮನಸ್ಸಿನ ನೆಮ್ಮದಿ ಬಯಸಿ. ವಿಶ್ವವಿಖ್ಯಾತ ಚಾಮುಂಡಿಬೆಟ್ಟ ದೇಶದ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಇದನ್ನು ರಾಜ್ಯ ಸರ್ಕಾರ ಧಾರ್ಮಿಕ ಕ್ಷೇತ್ರವಾಗಿ ಉಳಿಸಬೇಕು. ಇನ್ನುಮುಂದೆ ಯಾವುದೇ ದೊಡ್ಡ ದೊಡ್ಡ ಕಾಮಗಾರಿಗಳು, ರಸ್ತೆ ಅಗಲೀಕರಣ ಮುಂತಾದ ಅವೈಜ್ಞಾನಿಕ ಅಭಿವೃದ್ಧಿಗೆ ಹಾಗೂ ಗಿಡಮರಗಳನ್ನು ಕೆಡವುವುದಕ್ಕೆ ಮುಂದಾಗಬಾರದು ಎಂದು ಎಚ್ಚರಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ಚಾಮುಂಡಿಬೆಟ್ಟದಲ್ಲಿ ಭೂಕುಸಿತವಾಗಿರುವುದಕ್ಕೆ ತಜ್ಞರ ಸಲಹೆ ಪಡೆದು ಮತ್ತೆ ಮತ್ತೆ ಚಾಮುಂಡಿಬೆಟ್ಟದಲ್ಲಿ ಭೂಕುಸಿತವಾಗದಿರುವಂತೆ ಶಾಶ್ವತ ಪರಿಹಾರ ಮಾಡಬೇಕೆಂದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬೆಟ್ಟದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿ ಪೆÇೀಷಿಸಿ ಮತ್ತೆಂದೂ ಬೆಟ್ಟದಲ್ಲಿ ಭೂಕುಸಿತವಾಗದಂತೆ ಮುನ್ನೆಚ್ಚರಿಕೆವಹಿಸಬೇಕೆಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಿದರು.