ಚಾಮುಂಡಿ ಬೆಟ್ಟದಲ್ಲಿ ಆಷಾಢ ಸಂಭ್ರಮ

(ಸಂಜೆವಾಣಿ ನ್ಯೂಸ್)
ಮೈಸೂರು,ಜೂ.೩೦- ಆಷಾಢ ಶುಕ್ರವಾರ ಬಂದ್ರೆ ಸಾಕು ಅರಮನೆ ನಗರಿ ಮೈಸೂರು ಹಾಗೂ ಚಾಮುಂಡಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಭಕ್ತಿ ಪರಕಾಷ್ಠೆಯಲ್ಲಿ ಮಿಂದೇಳುತ್ತಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ೨ನೇ ಆಷಾಢ ಶುಕ್ರವಾರದಂದು ಅಂದ್ರೆ ಇಂದು ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ನಟ ಡಾಲಿ ಧನಂಜಯ್ ನಡದೇವತೆಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಮುಂಜಾನೆ ೩ ಗಂಟೆ ೩೦ ನಿಮಿಷಕ್ಕೆ ಅಭಿಷೇಕದೊಂದಿಗೆ ಆರಂಭವಾದ ಪೂಜಾ ಕೈಂಕರ್ಯ ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಿತ್ತು. ಅಲ್ಲದೇ ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಿ ಬಳಿಕ ೫ ಗಂಟೆ ೩೦ ನಿಮಿಷಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಟ್ಟಕ್ಕೆ ಹೋಗಲು ಭಕ್ತರಿಗೆ ಜಿಲ್ಲಾಡಳಿತ ೫೦ ಕೆಎಸ್‌ಆರ್‍ಟಿಸಿ ಬಸ್ಸಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ನಗರದ ಲಲಿತಾ ಮಹಲ್ ಹೆಲಿಪ್ಯಾಡ್ ಸಮೀಪದಿಂದ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಲಲಿತಾ ಮಹಲ್ ಪ್ಯಾಲೇಸ್ ಹೆಲಿಪ್ಯಾಡ್‌ನಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ೩೦೦ ಮತ್ತು ೫೦ ರೂಪಾಯಿ ಟಿಕೆಟ್ ಮುಂದುವರಿದಿದೆ ಎಂದು ಆಡಳಿತ ಮಂಡಳಿ ತಿಳಸಿದೆ.
ಇನ್ನು ಆಷಾಢ ಶುಕ್ರವಾರದಂದು ಶಕ್ತಿ ದೇವತೆಯನ್ನು ಪೂಜಿಸಿದವರಿಗೆ ವಿಘ್ನಗಳು ನಿವಾರಣೆಯಾಗಿ, ಇಷ್ಟಾರ್ಥ ಸಿದ್ಧಿಸುತ್ತದೆ ಅನ್ನೋ ನಂಬಿಕೆಯಿದೆ. ಈ ನಿಟ್ಟಿನಲ್ಲಿ ಮೈಸೂರು ಮಾತ್ರವಲ್ಲದೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ಸಹಾ ೨ನೇ ಆಷಾಢ ಶುಕ್ರವಾರದ ಪೂಜೆಗೆ ಆಗಮಿಸಿದ್ದಾರೆ. ಒಟ್ಟಾರೆ ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಎರಡನೇ ಶುಕ್ರವಾರದ ಆಷಾಢ ಮಾಸದ ಪೂಜೆಯಲ್ಲಿ ಮಿಂದೆದ್ದಿದೆ.