ಚಾಮರಾಯನಕೋಟೆಯಲ್ಲಿ ಸೀಮೋಲಂಘನ ಕಾರ್ಯಕ್ರಮ

ಬೆಟ್ಟದಪುರ: ಸೆ.23: ಇಡೀ ಜಗತ್ತಿಗೆ ಆದರ್ಶಪ್ರಾಯ ಸಂಸ್ಕೃತಿ ಎಂದರೆ ಅದು ಭಾರತ ಸಂಸ್ಕೃತಿ ಜಗತ್ತೇ ನಮ್ಮ ಸಂಸ್ಕೃತಿಯನ್ನು ಕೊಂಡಾಡುತ್ತಿದೆ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಮಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ತಿಳಿಸಿದರು.
ಸಮೀಪದ ಚಾಮರಾಯನಕೋಟೆ ಗ್ರಾಮದಲ್ಲಿ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಪ್ಲವನಾಮ ಸಂವತ್ಸರದ 39ನೇ ಚಾತುರ್ಮಾಸ್ಯದ ವೃತಾನುಷ್ಠಾನದ ಸೀಮೋಲಂಘನ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಆಧ್ಯಾತ್ಮಿಕ ಅರಿವು ತುಂಬಾ ಮುಖ್ಯವಾದುದು, ಪ್ರಾಚೀನ ಕಾಲದಿಂದಲೂ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಇದಕ್ಕೆ ಪೂರಕವೆಂಬಂತೆ ವೇದ ಪುರಾಣಗಳಲ್ಲಿ ವಿಶ್ವಕರ್ಮ ಜನಾಂಗದ ಉಲ್ಲೇಖವಿದೆ ಎಂದು ಆಶೀರ್ವಚನ ನೀಡಿದರು. ಎಲ್ಲಾ ಗುರುಪೀಠಗಳು ಕೂಡ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಇದನ್ನು ಪ್ರತಿಯೊಬ್ಬರು ಗೌರವಿಸಬೇಕು ಅದರ ಮುಖಾಂತರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಭಾರತದಲ್ಲಿ ವಿಶೇಷವಾದ ಧಾರ್ಮಿಕ ತಳಹದಿ ಹೊಂದಿದೆ ಎಲ್ಲಾ ಸಮುದಾಯದವರು ಒಂದೇ ದೇಶದಲ್ಲಿ ಅತ್ಯಂತ ಸಾಮರಸ್ಯದಿಂದ ಜೀವನ ನಡೆಸುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಇರುವಂತಹ ಶಿಲ್ಪಕಲಾಕೃತಿಗಳು ಭಾರತದ ಸಂಸ್ಕೃತಿಯನ್ನು ಅತ್ಯಂತ ಶ್ರೀಮಂತಗೊಳಿಸಿವೆ ಮುಂದಿನ ನವ ಪೀಳಿಗೆಗೆ ಸಂಸ್ಕಾರದ ಮಾರ್ಗವನ್ನು ಅರ್ಥೈಸಬೇಕು.ಆಗ ಅವರ ಜೀವನ ಸರ್ವ ಶ್ರೇಷ್ಠವಾಗಿ ಹೊರಹೊಮ್ಮುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ಕಾವೇರಿ ನದಿ ದಂಡೆಯಲ್ಲಿರುವ ಈಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಂಗಳ ವಾದ್ಯ ಗೋಷ್ಠಿಯೊಂದಿಗೆ ಮಹಿಳೆಯರು ಕುಂಭ ಕಳಸ ಹೊತ್ತು ಸ್ವಾಮೀಜಿಯವರನ್ನು ಬರಮಾಡಿಕೊಂಡರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ನೇತ್ರಾವತಿ, ಲಿಂಗಮೂರ್ತಿ, ಸುಬ್ರಹ್ಮಣ್ಯ, ಲೋಕೇಶ್, ನಾಗೇಂದ್ರ, ರಾಜಾಚಾರ್, ಅಣ್ಣಯ್ಯಚಾರ್, ಹರೀಶ್ ಪುಟ್ಟರಾಜು ಸೇರಿದಂತೆ ಸುತ್ತಮುತ್ತಲಿನ ವಿಶ್ವಕರ್ಮ ಜನಾಂಗದವರು ಗ್ರಾಮಸ್ಥರು ಇದ್ದರು.