ಚಾಮರಾಜನಗರ ಸಂಪೂರ್ಣ ಲಾಕ್‍ಡೌನ್

ಚಾಮರಾಜನಗರ, ಏ.24- ಕೊರೊನಾ ವೈರಸ್‍ನ ಎರಡನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಜಾರಿಗೆ ತಂದಿರುವ ವೀಕೆಂಡ್ ಲಾಕ್‍ಡೌನ್ ನಗರದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿದಿನ 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡು ಬರುತ್ತಿದ್ದಾರೆ.
ಏಪ್ರಿಲ್ 23ರ ಶುಕ್ರವಾರ ರಾತ್ರಿ 9 ಗಂಟೆಯಿಂದ ಏಪ್ರಿಲ್ 26ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗಿನ ವಾರಾಂತ್ಯ ಕಫ್ರ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಅದರಂತೆ ಇಂದು ವೀಕೆಂಡ್ ಕಫ್ರ್ಯೂವಿನ ಮೊದಲ ದಿನವಾದ ಶನಿವಾರ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಾದ ದಿನಸಿ ಪದಾರ್ಥಗಳು, ಹಾಲು, ಮೊಸರು ಮತ್ತು ಮೀನು, ಮಾಂಸ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. 10 ಗಂಟೆಯ ನಂತರ ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳ ಬಾಗಿಲು ಮುಚ್ಚಿಸಲಾಯಿತು.
ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಇದ್ದರೂ ಕೂಡ ಜನರಿಲ್ಲದೆ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಮೈಸೂರು ಕಡೆಯ ಬಸ್‍ಗಳು ಮಾತ್ರ 15ಕ್ಕಿಂತ ಹೆಚ್ಚು ಜನರು ಬರುವವರೆಗೂ ಕಾದು ನಂತರ ಪ್ರಯಾಣ ಬೆಳೆಸುತ್ತಿವೆ. ಪ್ರಯಾಣಿಕರಿಲ್ಲದೆ ಇರುವ ಕಾರಣ ಆಟೋ, ಟ್ಯಾಕ್ಸಿಗಳು ವಿರಳವಾಗಿತ್ತು.
ನಗರದ ಪ್ರಮುಖ ರಸ್ತೆಗಳಾದ ಡೀವಿಯೇಷನ್ ರಸ್ತೆ, ಜೋಡಿ ರಸ್ತೆಗಳಲ್ಲಿ ಜನರಿಲ್ಲದೆ ಭಣಗುಡುತ್ತಿತ್ತು. ಹಾಗೆಯೇ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ ವ್ಯಾಪಾರಿಗಳು, ಜವಳಿ ವ್ಯಾಪಾರಿಗಳು ಮತ್ತು ದಿನಸಿ ವ್ಯಾಪಾರಸ್ಥರು ಹೆಚ್ಚು ಇರುವುದರಿಂದ ಈಗಾಗಲೇ ಜವಳಿ ಅಂಗಡಿಗಳು, ಚಿನ್ನ ಬೆಳ್ಳಿ ಅಂಗಡಿಗಳನ್ನು ಮೇ 4ರವರೆಗೂ ತೆರೆಯದಂತೆ ಸೂಚನೆ ನೀಡಿರುವುದರಿಂದ ಕೇವಲ ದಿನಸ ವ್ಯಾಪಾರ ಮಾತ್ರ ನಡೆಯುತ್ತಿದೆ.
ಆದರೆ ಇಂದು ವಾರಾಂತ್ಯ ಕಫ್ರ್ಯೂ ಇರುವುದರಿಂದ ಅವುಗಳು ಸಹ ಬಂದ್ ಮಾಡಿ ಅಂಗಡಿ ಬೀದಿ ಸ್ಥಬ್ಧವಾಗಿದೆ.
ಈಗಾಗಲೇ ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಸಿನಿಮಾ ಮಂದಿರಗಳು, ಜಿಮ್, ಯೋಗಾ ಮಂದಿರಗಳು ಕಳೆದ ಮೂರು ದಿನಗಳಿಂದಲೇ ಮುಚ್ಚಿವೆ. ಇಂದು ಬಾರ್, ಹೋಟೆಲ್‍ಗಳು ಸಹ ಬಂದ್ ಮಾಡಲಾಗಿದೆ.
ಬ್ಯಾಂಕ್, ಇನ್ಸೂರೆನ್ಸ್ ಸಂಸ್ಥೆಗಳು ಗ್ರಾಹಕರಿಲ್ಲದೆ ಕೇವಲ ಸಿಬ್ಬಂದಿ ವರ್ಗದವರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಔಷಧಿ ಅಂಗಡಿಗಳು ಖಾಸಗಿ ಆಸ್ಪತ್ರೆಗಳು ಮಾತ್ರ ತೆರೆದಿದ್ದು, ರೋಗಿಗಳು ಖಾಸಗಿ ವಾಹನಗಳಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಅನಗತ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದರೂ ಕೆಲವು ವ್ಯಕ್ತಿಗಳು ಚಿಕಿತ್ಸೆ ನೆಪ ಹೇಳಿ ತಿರುಗಾಡುತ್ತಿದ್ದಾರೆ.
ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಕೆಲವು ಮಂದಿಗಳಿಗೆ ಪೋಲಿಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಕೆಲವು ಯುವಕರು ಬೈಕ್‍ನಲ್ಲಿ ತಿರುಗಾಡುತ್ತಾ ಲಾಕ್‍ಡೌನ್ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿರುವುದು ಸಹ ಕಂಡು ಬಂದಿರುತ್ತದೆ.
ಒಟ್ಟಾರೆಯಾಗಿ ಚಾಮರಾಜನಗರ ಟೌನ್ ಯಾವುದೇ ಚಟುವಟಿಕೆಗಳಿಲ್ಲದೆ ಸಂಪೂರ್ಣ ಲಾಕ್‍ಡೌನ್ ಆಗಿದೆ.