
ಚಾಮರಾಜನಗರ, ಮಾ.29:- ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾಗಿರುವ ವಿನೂತನ ಮಾದರಿಯ ಚಾಮರಾಜನಗರ ವಿಶ್ವವಿದ್ಯಾನಿಲಯ ಉದ್ಘಾಟನೆ ನೆರವೇರಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಚಾಲನೆ ನೀಡಿದರು. ಉನ್ನತ ಶಿಕ್ಷಣ ಸಚಿವಡಾ. ಸಿ.ಎನ್. ಅಶ್ವಥ್ ನಾರಾಯಣ ಸೇರಿದಂತೆ ಇತರೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಚಾಮರಾಜನಗರದ ಸುವರ್ಣಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಸ್ಥಳೀಯವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಇಲ್ಲಿದ್ದ ಸ್ನಾತಕೋತ್ತರಕೇಂದ್ರಆರಂಭಕ್ಕೆ ಹಲವರಕೊಡುಗೆ ಇದೆ. ಇಂದು ವಿಶ್ವವಿದ್ಯಾನಿಲಯ ಕೂಡ ಆರಂಭವಾಗಿದೆ. ಶೈಕ್ಷಣಿಕ ಸೌಲಭ್ಯಗಳು ಜಿಲ್ಲೆಗೆ ಬಂದಿವೆ. ಪ್ರತ್ಯೇಕ ಮಹಿಳಾ ಕಾಲೇಜು ಇದ್ದು ಇದಕ್ಕಾಗಿ ಸ್ವಂತಕಟ್ಟಡ ಬರಲಿದೆ. ಅಲ್ಲದೇ ಈ ಹಿಂದೆಯೇ ಆರಂಭಗೊಂಡಿರುವ ಕೃಷಿ ವಿಜ್ಞಾನ ಕಾಲೇಜಿಗೆಯಡ ಬೆಟ್ಟದ ಬಳಿ ಸ್ವಂತಕಟ್ಟಡ ನಿರ್ಮಾಣವಾಗಲಿದೆ ಎಂದರು.
ಜಿಲ್ಲೆಯು ಅಭಿವೃದ್ದಿಯತ್ತ ಸಾಗುತ್ತಿದೆ. ಕೆರೆಗಳಿಗೆ ನೀರು, ಮೂಲ ಸೌಕರ್ಯಗಳು ಲಭಿಸಿವೆ. ಪ್ರಸ್ತುತ ಪ್ರಾರಂಭವಾಗಿರುವ ನೂತನ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಭೂಮಿಯ ಅವಶ್ಯಕತೆ ಇದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಜಿಲ್ಲಾಧಿಕಾರಿಡಿ.ಎಸ್. ರಮೇಶ್‍ಅವರು ಪ್ರಾಥಮಿಕ ಶಿಕ್ಷಣದಿಂದ ವಿವಿಧ ಹಂತದ ವ್ಯಾಸಂಗ ಮಾಡಿ ವಿಶ್ವವಿದ್ಯಾನಿಲಯಕ್ಕೂ ಹೆಜ್ಜೆ ಇಟ್ಟು ಸ್ನಾತಕೋತ್ತರ ಪದವೀಧರರಾಗಿ ಹೊರಬರುವವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಿದಾಗ ಅಲ್ಲಿಇಡೀ ವಿಶ್ವವನ್ನೇ ಸೃಷ್ಠಿಸುವಂತಾಗಬೇಕು. ಆಗ ಸಾರ್ಥಕತೆಯಾಗಲಿದೆ ಎಂದರು.
ನೂತನ ವಿಶ್ವವಿದ್ಯಾನಿಲಯ ಇಡೀ ರಾಷ್ಟ್ರದಲ್ಲೇ ಹೆಸರು ಗಳಿಸುವಂತಾಗಲಿ. ಉನ್ನತ ಮಟ್ಟಕ್ಕೆ ಏರಿ ಜಿಲ್ಲೆಯ ಸಾಧನೆ ಬೆಳಗಲಿ. ಇಲ್ಲಿನ ವೈಶಿಷ್ಟ್ಯ ಪೂರ್ಣತೆಯನ್ನು ಪಸರಿಸಲಿ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಹಾರೈಸಿದರು.
ಅಧ್ಯಕ್ಷ ವಹಿಸಿ ಮಾತನಾಡಿದ ಚಾಮರಾಜನಗರ ವಿವಿ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅವರು ಇಂದು ಸುವರ್ಣ ದಿನ. ಚಾಲನೆಗೊಂಡಿರುವ ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಹಲವಾರು ಗಣ್ಯರು ಶ್ರಮಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡುವ ಗುಣವುಳ್ಳವರಾಗಿದ್ದಾರೆ. ಮೈಸೂರು ವಿವಿ ಘಟಿಕೋತ್ಸವದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದವರು ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಎಂಬುದು ಹಿರಿಮೆಯಾಗಿದೆ ಎಂದರು.
ಚಾಮರಾಜನಗರ ವಿಶ್ವವಿದ್ಯಾನಿಲಯವನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಗುರಿ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಪದವಿಗಷ್ಟೇ ಗಮನ ಹರಿಸುವುದಿಲ್ಲ. ಸ್ಪರ್ಧಾತ್ಮಕ ಪ್ರಪಂಚವಾಗಿರುವ ಪ್ರಸ್ತುತ ಸಂದರ್ಭದಲ್ಲಿ ವೃತ್ತಿಪರ ಕೊರ್ಸು ತರಬೇತಿ ಯನ್ನು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುವ ಚಿಂತನೆ ಇದ್ದು ಇದರ ಸಾಕಾರಕ್ಕೆ ಎಲ್ಲರ ಸಹಕಾರದೊಂದಿಗೆ ಮುಂದಾಗುವುದಾಗಿ ಪ್ರೊ. ಎಂ.ಆರ್. ಗಂಗಾಧರ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವಣ್ಣ ಮೂಕಳ್ಳಿ ಅವರು ಉಪಸ್ಥಿತರಿದ್ದರು.