ಚಾಮರಾಜನಗರ ಲಾಕ್‍ಡೌನ್: ಅದೇ ರಾಗ ಅದೇ ಹಾಡು

ಚಾಮರಾಜನಗರ, ಜೂ. 02- ಎಲ್ಲೆಲ್ಲೂ ಜನ ಜಂಗುಳಿ, ಸಾಮಾಜಿಕ ಅಂತರ ಮಾಯ, ದ್ಚಿಚಕ್ರವಾಹನಗಳ ನಿರಂತರ ಓಡಾಟ, ಜಿಲ್ಲಾಡಳಿತ ಸಂಪೂರ್ಣ ವಿಫಲ ಇದು ಮೂರು ದಿನಗಳ ಸೆಮಿ ಲಾಕ್‍ಡೌನ್ ಕೊನೆಯ ದಿನವಾದ ಇಂದು ಚಾಮರಾಜನಗರದಲ್ಲಿ ಕಂಡು ಬಂದ ದೃಶ್ಯ.
ಮೂರು ದಿನಗಳ ಕಾಲ ದಿನಸಿ ಪದಾರ್ಥಗಳು ಹಾಗೂ ಮಧ್ಯ ಖರೀದಿಸಲು ಜಿಲ್ಲಾಡಳಿತ ಬೆಳಿಗ್ಗೆ 6 ರಿಂದ 10 ರವರೆಗಿನ ಅವಕಾಶ ನೀಡುತ್ತಿದೆ.
ಇದನ್ನೇ ನೆಪವಾಗಿಸಿಕೊಂಡ ಜನರು ಅಂಗಡಿ ಬೀದಿಯಲ್ಲಿನ ದಿನಸಿ ಅಂಗಡಿಗಳಲ್ಲಿ ಎದ್ದು ಬಿದ್ದು ನೂಕು ನುಗ್ಗಲಿನಲ್ಲಿ ಪದಾರ್ಥಗಳನ್ನು ಖರೀದಿ ಮಾಡುತ್ತಿದ್ದರು. ಈ ಸಮಯದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕೋವಿಡ್ ನಿಯಮಗಳನ್ನು ಪಾಲಿಸದೇ ವ್ಯಾಪಾರ ವಹಿವಾಟು ನಡೆಸುತ್ತಿದುದು ಸರ್ವೇ ಸಾಮಾನ್ಯವಾಗಿತ್ತು.
ಅಂಗಡಿ ಬೀದಿಗಳಲ್ಲಿ ವಾಹನಗಳಲ್ಲಿ ಹೋಗಿ ಖರೀದಿಸುವುದಕ್ಕೆ ಅವಕಾಶ ನೀಡದೇ ಪ್ರಾರಂಭದಲ್ಲಿಯೇ ಬ್ಯಾರಿಕೇಡ್‍ಗಳನ್ನು ಹಾಕಿ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಜನರು ಕಾಲ್ನಡಿಗೆಯಲ್ಲಿಯೇ ಹೋಗಿ ದಿನಸಿ ಪದಾರ್ಥಗಳನ್ನು ಖರೀದಿಸುವಂತಾಗಿದೆ. ಆದರೂ ಸಹ ಅಂಗಡಿಬೀದಿಯಲ್ಲಿ ಜನ ಗುಂಪು ಗುಂಪಾಗಿ ಓಡಾಡಿಕೊಂಡು ಧಾವಂತವಾಗಿ ಖರೀದಿ ಮಾಡುತ್ತಿದ್ದರು.
ಅಲ್ಲದೆ ಲಾಕ್‍ಡೌನ್ ಘೋಷಿಸಿದ್ದರೂ ಸಹ ಜೋಡಿ ರಸ್ತೆಯಲ್ಲಿ ವಾಹನಗಳ ಓಡಾಟ ಯಥೇಚ್ಚವಾಗಿ ಕಂಡು ಬರುತ್ತಿದೆ.
ಈ ಬಗ್ಗೆ ಪದೇ ಪದೇ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ಸಹ ಜಿಲ್ಲಾಡಳತಿ ಕಣ್ಣುಮುಚ್ಚಿ ಕುಳಿತಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಇಳಿಮುಖವಾಗುತ್ತಿದೆ. ಅಲ್ಲದೆ ಲಾಕ್‍ಡೌನ್ ಅವಧಿಯು ಸಹ ಅಂತ್ಯವಾಗುವ ಸಮಯ ಬರುತ್ತಿದೆ. ಇಂತಹ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ತಡೆಗಟ್ಟಬೇಕಾದ ಜಿಲ್ಲಾಡಳಿತವು ಕಾಟಾಚಾರಕ್ಕೆ ಕೆಲವು ಹೋಮ್‍ಗಾರ್ಡ್ ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ಕುರ್ಚಿ ಹಾಕಿ ಕೂರಿಸಿ ಕಣ್ಣುಮುಚ್ಚಿ ಕುಳಿತಿದೆ.