ಚಾಮರಾಜನಗರ ನಗರಸಭೆ ಅಧ್ಯಕ್ಷರಾಗಿ ಆಶಾ ನಟರಾಜು, ಉಪಾಧ್ಯಕ್ಷರಾಗಿ ಸುಧಾ ಆಯ್ಕೆ

ಎರಡನೇ ಬಾರಿ ಅಧಿಕಾರಕ್ಕೇರಿದ ಬಿಜೆಪಿ
ಚಾಮರಾಜನಗರ, ನ. 3- ಚಾಮರಾಜನಗರ ನಗರಸಭೆ ಅಧಿಕಾರವನ್ನು ಬಿಜೆಪಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಿಎಸ್‍ಪಿ ಸದಸ್ಯ ಪ್ರಕಾಶ್ ಬೆಂಬಲದೊಂದಿಗೆ ಜಿಲ್ಲಾ ಕೇಂದ್ರ ನಗರಸಭೆಯನ್ನು ಎರಡನೇ ಬಾರಿ ಹಿಡಿಯುವಲ್ಲ್ಲಿ ಯಶಸ್ವಿಯಾಗಿದೆ.
ನಗರಸಭೆಯ ಅಧ್ಯಕ್ಷರಾಗಿ 7ನೇ ವಾರ್ಡಿನ ಆಶಾನಟರಾಜು, ಉಪಾಧ್ಯಕ್ಷರಾಗಿ 29ನೇ ವಾರ್ಡಿನ ಪಿ. ಸುಧಾ ಆಯ್ಕೆಯಾದರು. ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮಧ್ಯಾಹ್ನ ಅಧ್ಯಕ್ಷ –ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ಬಿಜೆಪಿ 17 ಮಂದಿ ಸದಸ್ಯರು ಒಟ್ಟಿಗೆ ಪ್ರವೇಶ ಮಾಡಿ, ನಗರಸಭೆ ಅಧಿಕಾರ ಬಿಜೆಪಿಗೆ ಒಲಿಯುವಂತೆ ಮಾಡಿದರು.
ಶಾಸಕ ಪುಟ್ಟರಂಗಶೆಟ್ಟಿ ಗೈರು : ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಆಶಾ ಮತ್ತು ಪಿ. ಸುಧಾ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಶಾಂತಿ ಹಾಗೂ ಚಂದ್ರಕಲಾ ಉಮೇದುವಾರಿಕೆ ಸಲ್ಲಿಸಿದ್ದರು. ಮಧ್ಯಾಹ್ನ 3 ಗಂಟೆಗೆ ನಡೆದ ಚುನಾವಣೆ ಸಭೆಯಲ್ಲಿ ಬಿಜೆಪಿಗೆ ಸಂಸದ ವಿ. ಶ್ರೀನಿವಾಸಪ್ರಸಾದ್, ಬಿಎಸ್ಸಿ ಸದಸ್ಯ ಪ್ರಕಾಶ್ ಸೇರಿ 17 ಸದಸ್ಯ ಕೈ ಎತ್ತಿದರು. ಕಾಂಗ್ರೆಸ್ ಪರವಾಗಿ ಎಸ್‍ಡಿಪಿಐನ 6 ಸದಸ್ಯರು, ಕಾಂಗ್ರೆಸ್ ಪಕ್ಷದ 8 ಸದಸ್ಯರು ಕೈ ಎತ್ತಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಸಭೆಗೆ ಗೈರು ಹಾಜರಾಗಿದ್ದರು.
ನೂತನ ಅಧ್ಯಕ್ಷೆ ಆಶಾ ನಟರಾಜು ಮಾತನಾಡಿ, ಬಿಜೆಪಿಯ ಎಲ್ಲಾ ಸದಸ್ಯರು ಹಾಗೂ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರು, ಜಿಲ್ಲೆಯ ಶಾಸಕರು, ಎಲ್ಲಾ ಮುಖಂಡರು ಹಾಗು ಪಕ್ಷದ ಸದಸ್ಯರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಬಿಎಸ್‍ಪಿ ಪ್ರಕಾಶ್ ಅವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಎಲ್ಲರಿಗೂ ನಾನು ಅಭಾರಿಯಾಗಿದ್ಧೇನೆ. ಸಂಸದರ ಸಹಕಾರ ಮತ್ತು ನಗರಸಭೆ ಎಲ್ಲಾ ಸದಸ್ಯರು ಸಹಕಾರ ಸಲಹೆ ಸೂಚನೆಗಳು, ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುತ್ತೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಆಡಳಿತ ನಡೆಯುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಗರಸಭೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುಲು ಶ್ರಮಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಬಿಜೆಪಿಯ ಸದಸ್ಯರಾದ ಆರ್. ಸುದರ್ಶನಗೌಡ, ಮಂಜುನಾಥ, ಗೌರಿ, ಮಮತ, ಗಾಯಿತ್ರಿ, ಮಹದೇವಯ್ಯ, ರಾಘವೇಂದ್ರ, ಮನೋಜ್ ಪಟೇಲ್, ಶಿವರಾಜ್, ಕುಮುದ, ಚಂದ್ರಶೇಖರ್, ಲೋಕೇಶ್ವರಿ ಸುರೇಶ್ ಇದ್ದರು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಭಾಗ್ಯಮ್ಮ, ಚಿನ್ನಮ್ಮ, ಕಲಾವತಿ, ರಾಜಪ್ಪ, ನೀಲಮ್ಮ, ಎಸ್‍ಡಿಪಿಐ ಅಬ್ರಾರ್, ತೌಸಿಯಾ ಭಾನು, ಮಹೇಶ್, ಇಮ್ರಾನ್, ಅನೇಕ ಸದಸ್ಯರು ಇದ್ದರು.
ಬಳಿಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು.