ಚಾಮರಾಜನಗರ ನಗರಸಭೆಯ ಕರ್ಮಕಾಂಡ

ಸಂಜೆವಾಣಿ ವಾರ್ತೆ
ಹನೂರು ಮಾ 16 :- ನಗರಸಭೆ ಅಥವಾ ಮುನಿಸಿಪಾಲಿಟಿ ಎಂದಾಕ್ಷಣ ನೆನಪಾಗುವುದೇ ಕಸ , ಮೋರಿ ಸ್ವಚ್ಚತೆ , ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪಗಳ ನಿರ್ವಹಣೆ. ಆದರೆ ಚಾಮರಾಜನಗರ ನಗರಸಭೆಯ ಅಧಿಕಾರಿಗಳಿಗೆ ಇದೆಲ್ಲವು ಸಹ ನೆಪಕ್ಕೆ ಮಾತ್ರ.
ಮುಖ್ಯಮಂತ್ರಿಗಳ ಹಾಗೂ ಸರ್ಕಾರಿ ಸಮಾರಂಭಗಳಲ್ಲಿ ಮಾತ್ರ ಇವರ ವೀರಾವೇಶ ಹಾಗೂ ಯುದ್ಧ ಕಾಲ ಶಸ್ತ್ರಾಭ್ಯಾಸ ಸಮಾರೋಪಾಧಿಯಲ್ಲಿ ನಡೆಯುತ್ತದೆ, ಇದಕ್ಕೆ ಬಡಾವಣೆಯ ಕಸ ನಿರ್ವಹಣೆ , ಚರಂಡಿ ಸ್ವಚ್ಚತಾ ಕಾರ್ಯಗಳು , ಮನೆ ಮನೆ ಆಟೋ ಕಸ ಸಂಗ್ರಹಣೆ , ಕಸ ವಿಲೇವಾರಿ ಎಲ್ಲವೂ ಸಹ ತಲೆದಂಡ. ಯಾಕೆಂದರೆ ಇದಕ್ಕೆ ತಕ್ಕಂತೆ ನೀಡುವ ಸಮಜಾಯಿಷಿ ಸರಕಾರಿ ಸಮಾರಂಭ , ಹಿರಿಯ ಹುದ್ದೆಯವರ ಆಗಮನ ಸ್ಥಳೀಯ ಸಂಸ್ಥೆಯಾಗಿ ಇದು ನಮ್ಮ ಜವಾಬ್ದಾರಿ ಎಂದು ಮೂರ್ನಾಲ್ಕು ದಿನಗಳ ನಡುವೆ ಸಮಾರಂಭ ನಡೆಯುವ ಜಾಗದಿಂದ ಓಡಾಡುವ ರಸ್ತೆಯನ್ನೆಲ್ಲಾ ಒಮ್ಮೆಲೆ ಶುಚಿಗೊಳಿಸುವುದರಲ್ಲಿ ನಿರತ.
ಇದರಿಂದ ವಾರ್ಡ್ ಗಳ ಒಳಗಡೆ ಸ್ವಚ್ಚತಾ ಕಾರ್ಯ ಸಂಪೂರ್ಣ ಸ್ಥಗಿತ. ಇದರ ಬಗ್ಗೆ ಪರಿಸರ ಅಭಿಯಂತರರಿಂದ ಹಿಡಿದು ಕಿರಿಯ ಆರೋಗ್ಯ ನಿರೀಕ್ಷಕರವರೆಗೆ ಪ್ರಶ್ನಿಸದರೊಂದೆ ಉತ್ತರ ….ಟಿಪ್ಪರ್ ರಿಪೇರಿ , ಜೆ.ಸಿ.ಬಿ ರಿಪೇರಿ , ಟ್ರಾಕ್ಟರ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಜೊತಗೆ ಮನೆ ಮನೆ ಕಸ ಸಂಗ್ರಹಿಸುವ ಹಲವು ಆಟೋಗಳು ರಿಪೇರಿ ಹಾಗಾಗಿ ನಮಗೆ ಸರಿದೂಗಿಸುವುದರಲ್ಲೆ ಕಾಲಹರಣ ಆಗುತ್ತಿದೆ ಎನ್ನುತ್ತಾರೆ.
ಹಿರಿಯ ಆರೋಗ್ಯ ನಿರೀಕ್ಷಕ ಮಂಜುರವರು ವಾಹನದ ದುರಸ್ತಿ ಉಸ್ತುವಾರಿ ಆದರೆ ಅವರಿಗೆ ಸಮನ್ವಯದ ಕೊರತೆ ಜೊತೆಗೆ ಹೊಂದಾಣಿಕೆ ಇಲ್ಲದ ಆರೋಗ್ಯ ಇಲಾಖೆಯಲ್ಲಿ ಮೂರು ವಿಭಾಗಗಳಾಗಿ ಮೂರು ಆರೋಗ್ಯ ನಿರೀಕ್ಷಕರನ್ನು ನೇಮಿಸಿಯು ಸಹ ಸಮನ್ವಯತೆ ಕೊರತೆಯಿಂದ ಸ್ವಚ್ಚತಾ ಕಾರ್ಯ ದುಸ್ಥಿತಿ ತಲುಪಿದೆ.
ಅನೇಕ ಕಾಮಗಾರಿಗಳಿಗೆ ಬಿಲ್ಲು ಮಾಡಿಕೊಡುವ ಪೌರಾಯುಕ್ತರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಆರೋಗ್ಯ ಇಲಾಖೆಯ ಕೆಲಸಗಳಿಗೆ ಹಣ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ. ವಾಹನಗಳ ನಿರ್ವಹಣೆಗೆ , ಟಯರ್ ಖರೀದಿ , ರಿಪೇರಿ ಕಾರ್ಯಗಳಿಗೆ ಹಣ ವಿನಿಯೋಗಿಸಲು ಸಾಧ್ಯವಾಗದೆ ಕೆಟ್ಟು ನಿಂತಿರುವ ಟಿಪ್ಪರ್, ಹಲವು ಮನೆ ಮನೆ ಕಸ ವಿಲೇವಾರಿ ಆಟೋಗಳೆ ಜ್ವಲಂತ ಸಾಕ್ಷಿಯಾಗಿದೆ. ಹಲವು ಬಾರಿ ಡಿಸೇಲ್ ಹಾಕಿಸಲು ಹಣವಿಲ್ಲದೆ ಪರದಾಡಿರುವ ಪ್ರಸಂಗಗಳು ಜರುಗಿವೆ.
ಈ ಹಿಂದೆ ನಗರಸಭಾ ವ್ಯಾಪಾರ ಉದ್ಯಮದ ಪರವಾನಿಗೆ ಜಾಥಾ , ವಾಣಿಜ್ಯ ಕಂದಾಯ ವಸೂಲಿ ಕಾರ್ಯಕ್ರಮ,ಸಾರ್ವಜನಿಕ ರಸ್ತೆ ಬದಿಯಲ್ಲೇ ಅಂಗಡಿಗಳ ಕಸ ಅನಗತ್ಯವಾಗಿ ಬೀಸಾಡುವವರಿಗೆ ದಂಡ , ಪ್ಲಾಸ್ಟಿಕ್ ಬಳಕೆ ನಿಷೇಧ ದಂಡಗಳು ಹೀಗೆ ಹಲವು ರೀತಿಯಾಗಿ ವಸೂಲಾತಿಯಲ್ಲಿ ಮುಂದಿದ್ದ ನಗರಸಭೆಗೆ ಅದರಂತೆಯೇ ಖಜಾನೆ ತುಂಬುತ್ತಿತ್ತು.
ಬೇಸಿಗೆಯಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳುವಳಕೆ , ಬೀದಿ ಬದಿ ತಿಂಡಿ ತಿನಿಸುಗಳು ಮಾರುವವರಿಗೆ ತಿಳುವಳಿಕೆ ಹಾಗು ಉದ್ಯಮ ಪರವಾನಿಗೆ ಜೊತೆಗೆ ಮುಖ್ಯವಾಗಿ ಶುಚಿತ್ವದ ಪರಿಶೀಲನೆ ಇದ್ಯಾವುದು ಸಹ ನಡೆಯುತ್ತಲೆ ಇಲ್ಲ.
ಹಾಗಾಗಿ ಕ್ಲಬ್ ,ರೆಸಾರ್ಟ್ ಹೋಟೆಲ್ ಗಳಂದ ಹಿಡಿದು ಬೀದಿ ಬದಿ ತಿನಿಸು ಮಾರುವವರೂ ಸಹ ಶುಚಿತ್ವದ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದರೂ ಸಹ ಕಳೆದೆಂಟು ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಿರಿಯ ಆರೋಗ್ಯ ನಿರೀಕ್ಷಕ ಮಂಜುರವರು ಜಾಣ ಕುರುಡತನ ತೋರುತ್ತಿದ್ದಾರೆ.
ಇದಕ್ಕೆ ಸೌಮ್ಯವಾಗಿಯೇ ಸಮ್ಮತಿಸುವ ಪರಿಸರ ಅಭಿಯಂತರೆ ಗಿರಿಜಮ್ಮ. ಹೀಗೆ ಒಂದೊಂದಾಗಿ ಆರೋಗ್ಯ ಶಾಖೆಯನ್ನು ಅನಾರೋಗ್ಯದಿಂದ ಬಳಲುವಂತೆ ಮಾಡುತ್ತಿರುವ ಶ್ರೇಯ ಸನ್ಮಾನ್ಯ ಪೌರಾಯುಕ್ತರಿಗೆ ಸಲ್ಲುತ್ತದೆ. ಏಕೆಂದರೆ ಇವರಿಗೆ ನಗರಾಡಳಿತದ ನಿರ್ವಹಣೆಯ ಬಗ್ಗೆ ಅರಿವಿಲ್ಲ , ಕಸಮುಕ್ತ ನಗರದ ಜಾಗೃತಿಗೆ ಪಣ ತೊಡಲು ಒಲವಿಲ್ಲ.
ಆದಾಯ ಕ್ರೋಢೀಕರಿಸಿ ನಗರಸಭೆಯನ್ನು ಮಾದರಿ ನಗರಸಭೆ ಮಾಡಬೇಕೆಂಬ ಹಂಬಲವು ಸಹ ಇಲ್ಲ. ಅಕ್ರಮ ಅನಧಿಕೃತ ಖಾತೆಗಳು , ಅನಧಿಕೃತ ಲೇಔಟ್ಗಳ ಇಸ್ವತ್ತು ವಿತರಣೆ , ಹೊಸ ಹೊಸ ಬಡಾವಣೆಗಳ ಇ ಸ್ವತ್ತು ನೀಡುವುದರಲ್ಲಿ ಮಾತ್ರ ತಲ್ಲೀನ. ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ಕೇವಲ ಖಾತಾ ಮತ್ತು ಇ ಸ್ವತ್ತು ತಯಾರಿಸುವ ಹಾಗೂ ಅದರ ಮೂಲಕ ಹರಿಯುವ ಹಣಧಾಹವೇ ಅವರಿಗೆ ಸಂತೃಪ್ತಿ.