ಚಾಮರಾಜನಗರದ ಅಭಿವೃದ್ಧಿಗಾಗಿ ನನ್ನನ್ನು ಆಯ್ಕೆ ಮಾಡಿ

ಚಾಮರಾಜನಗರ, ಏ.30:- ಚಾಮರಾಜನಗರದ ಅಭಿವೃದ್ಧಿಗಾಗಿ ನನ್ನನ್ನುಆಯ್ಕೆ ಮಾಡಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರು ಮನವಿ ಮಾಡಿದರು.
ಅವರು ಇಂದು ಸಂಜೆ 4 ಗಂಟೆಗೆ ನಗರಕ್ಕೆ ಆಗಮಿಸಿನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸೇರಿದಂತೆ ವಿವಿದೆಡೆ ಪ್ರಚಾರಕೈಗೊಂಡು ಮತಯಾಚನೆ ಮಾಡಿ, ಮಾತನಾಡಿದ ಅವರು ಚಾಮರಾಜನಗರಕ್ಕೆ ಕಾವೇರಿ ನೀರನ್ನುತಂದು ನಗರದ ಜನತೆಗೆ ಅನುಕೂಲ ಕಲ್ಪಿಸಿದ್ದೇನೆ. ಚಾಮರಾಜನಗರ ತಾಲ್ಲೂಕನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಿರುತ್ತೇನೆ.
ಇಂದು ರಾಜಕೀಯ ಭ್ರಷ್ಟಚಾರದಿಂದ ಕೂಡಿರುತ್ತದೆ. ನಾನು ಒಬ್ಬ ಸೂಪರ್ ಮಾಡೆಲ್, ಇವತ್ತು ಯಾರಾದರೂ ಶಾಸನ ಸಭೆಗೆ ವಾಟಾಳ್ ನಾಗರಾಜ್‍ಗಿಂತ ಮತ್ತೊಬ್ಬ ವ್ಯಕ್ತಿ ಶಾಸನಸಭೆಗೆ ಸರಿಯೆಂದು ಪ್ರಾಮಾಣಿಕವಾಗಿ ಹೇಳಿದರೆ ಸಂತೋಷಪಡುತ್ತೇನೆ.
ಚಾಮರಾಜನಗರದ ಅಭಿವೃದ್ಧಿಗೆ ಕಾವೇರಿ 2ನೇ ಹಂತತರಬೇಕು, ಚಂದಕವಾಡಿ, ಬದನಗುಪ್ಪೆ ಗ್ರಾಮಗಳನ್ನು ಉಪನಗರವನ್ನಾಗಿ ಮಾಡಬೇಕು.
ಚಾಮರಾಜನಗರಕ್ಕೆ ಕಳೆದ 15 ವರ್ಷಗಳಿಂದಒಂದು ನಯಾಪೈಸೆ ನೀಡಿಲ್ಲ. ನಗರಕ್ಕೆ ಮುಖ್ಯಮಂತ್ರಿಗಳು ಆಗಮಿಸದೇ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ. ಇದು ಚಾಮರಾಜನಗರಕ್ಕೆ ಮಾಡಿದ ಅಪಮಾನ. ನಗರದ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ಇದಕ್ಕಾಗಿ ವಾಟಾಳ್ ಗೆಲ್ಲಬೇಕು. ನನ್ನ ಬಳಿ ಹಣ ಇಲ್ಲ, ನನಗೆ ಜಾತಿ ಇಲ್ಲ. ನನಗೆ ಜನರ ಪ್ರೀತಿ ಅಭಿಮಾನವಿದೆ. ಚಾಮರಾಜನಗರದ ಜನರನ್ನು, ಹಾಗೂ ಮತದಾರರನ್ನು ವ್ಯಾಪಾರ ಮಾಡಲು ಆಗುವುದಿಲ್ಲ. ಚುನಾವಣಾ ಆಯೋಗವು ಪ್ರತಿ ಹೋಬಳಿ ಕೇಂದ್ರಕ್ಕೂ ವೀಕ್ಷಕರನ್ನು ನೇಮಕ ಮಾಡಬೇಕು, ಹಣ ಹಂಚದಂತೆ ಕ್ರಮಕೈಗೊಳ್ಳಬೇಕು ಎಂದು ತೀವ್ರವಾಗಿ ಒತ್ತಾಯ ಮಾಡಿದರು.
ಕಾಂಗ್ರೆಸ್, ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡದೆ ನನಗೆ ಮತ ನೀಡಿ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ನನ್ನ ಕೊನೆಯ ಚುನಾವಣೆ: ಈ ಬಾರಿಯ ಚುನಾವಣೆಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದರೆ ಚಾವ್ಮರಾಜನಗರವನ್ನು ಐತಿಹಾಸಿಕ ನಗರವನ್ನಾಗಿ ಮಾಡುತ್ತೇನೆ ಹಾಗೂ ನಿರಂತರವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಒಂದು ವೇಳೆ ಆಯ್ಕೆ ಮಾಡದಿದ್ದಲ್ಲಿ ಚಾಮರಾಜನಗರದಲ್ಲಿ ಇದೇ ಕೊನೆ ಚುನಾವಣೆ, ಚಾಮರಾಜನಗರದ ಸಂಬಂಧವು ಸಹ ಕೊನೆಯಾಗಲಿದೆ. ಚಾಮರಾಜನಗರಕ್ಕೆ ಆರು ದಶಕಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ನನ್ನನ್ನು ಉಳಿಸಿಕೊಳ್ಳುವ ಶಕ್ತಿ ನಿಮಗೆ ಬಿಟ್ಟಿದ್ದು, ನೀವು ನನ್ನ ಉಳಿಸಿಕೊಳ್ಳುತ್ತೀರಿ ಎಂಬ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹುಂಡಿ ಬಸವಣ್ಣ, ಬಸಪ್ಪನಪಾಳ್ಯ ಕುಮಾರ, ಗೋಪಾಲನಾಯ್ಕ, ವರದನಾಯ್ಕ, ವಡ್ಡರಹಳ್ಳಿ, ಪಣ್ಯದಹುಂಡಿ ರಾಜು, ಚಾ.ರಂ. ಶ್ರೀನಿವಾಸಗೌಡ, ಸಂಜು, ರಾವತ್, ಶಿವಲಿಂಗಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ನಾಳೆ ಪ್ರಮುಖ ಬೀದಿಗಳಲ್ಲಿ ವಾಟಾಳ್ ನಾಗರಾಜ್ ಅವರು ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ರೋಡ್ ಷೋ ನಡೆಸಲಿದ್ದಾರೆ.