ಚಾಮರಾಜನಗರದಲ್ಲಿ ಶೃಂಗೇರಿ ಶ್ರೀಗೆ ಪೂರ್ಣಕುಂಭ ದೊಂದಿಗೆ ಭವ್ಯ ಸ್ವಾಗತ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.30- ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮಿಗಳವರು ಚಾಮರಾಜನಗರ ಜಿಲ್ಲೆಗೆ ಪ್ರವೇಶಿಸಿದಾಗ ಭವ್ಯ ಸ್ವಾಗತವನ್ನು ಕೋರಲಾಯಿತು.
ಚಾಮರಾಜನಗರ ಜಿಲ್ಲಾ ಕೆಂದ್ರಕ್ಕೆ ಆಗಮಿಸಿದಾಗ ಗಡಿ ಭಾಗದಲ್ಲಿ ನೂರಾರು ವಿಪ್ರ ಬಾಂಧವರು ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ವೇದ ಮಂತ್ರ ಘೋಷ, ನಾದಸ್ವರದೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಭಕ್ತಿ ಪೂರ್ವಕ ಪ್ರಾಣಾಮಗಳನ್ನು ಸಲ್ಲಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷಜಿ ಎಂ.ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಎನ್ ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯಂ, ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ್‍ಶಾಸ್ತ್ರಿ, ಯಳಂದೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಮುರಳಿ, ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷರು, ಶ್ರೀ ರಾಮಮಂದಿರ, ಸೇರಿದಂತೆ ಸಂಘಟನೆಗಳ ಸದಸ್ಯರು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಅವರು ಚಾಮರಾಜನಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ. ಕಮರವಾಡಿ ಶ್ರೀ ಸಪ್ತಮಾತ್ರಕ ದೇವಸ್ಥಾನಕ್ಕೆ ಆಗಮಿಸಿ ಸಪ್ತ ಮಾತೃಕೆ ಪೂಜಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಆಶೀರ್ವಚನ ನೀಡಿದರು.
ನಂತರ ಹೆಬ್ಬ ಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಾರದಾಕೃಪ ಭವನವನ್ನು ಶ್ರೀ ವಿಧು ಶೇಖರ ಭಾರತಿ ಸ್ವಾಮಿಗಳು ಉದ್ಘಾಟಿಸಿದರು. ಜಗದ್ಗುರುಗಳನ್ನು ಶೃಂಗೇರಿ ಶಂಕರ ಮಠದ ಶಾಖಾಮಠದ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ್, ತಾಲ್ಲೂಕು ಬ್ರಾಹ್ಮಣದ ಸಂಘದ ಅಧ್ಯಕ್ಷ ನಾಗರಾಜು ಸೇರಿದಂತೆ ನೂರಾರು ಭಕ್ತರು ಬರಮಾಡಿಕೊಂಡರು. ಅಗ್ರಹಾರದ ಸುತ್ತಲೂ ಭವ್ಯ ವೇದಿಕೆ, ಚಪ್ಪರ ಹಾಸು, ವೇದ ಘೋಷ, ಸ್ತೋತ್ರ ಪಠಣಗಳ ಮೂಲಕ ಪ್ರತಿ ಮನೆ ಮನೆಯಲ್ಲೂ ಆರತಿ ಎತ್ತುವ ಮೂಲಕ ಭಕ್ತಿ ಪೂರ್ವಕವಾಗಿ ಪರಮಾಡಿಕೊಳ್ಳಲಾಯಿತು. ನಂತರ ಶ್ರೀಗಳವರು ಚಂದ್ರಮೌಳೇಶ್ವರ ಪೂಜೆಯನ್ನು ನೆರವೇರಿಸಿದರು.