ಚಾಮರಾಜನಗರದಲ್ಲಿ ಲಾಕ್‍ಡೌನ್ ಆರಂಭ

ಚಾಮರಾಜನಗರ, ಏ.28- ಕೊರೊನಾ ರೂಪಾಂತರ ವೈರಸ್‍ನ ತಡೆಗಟ್ಟಲು ರಾಜ್ಯಾದ್ಯಂತ ಜಾರಿಗೆ ತಂದಿರುವ 14 ದಿನಗಳ ಲಾಕ್‍ಡೌನ್‍ನ ಮೊದಲ ದಿನವಾದ ಇಂದು ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಈಗಾಗಲೇ ಕಳೆದ ವರ್ಷವೇ ಲಾಕೌಡ್‍ನ್ ಅನುಭವಿಸಿರುವ ಜಿಲ್ಲೆಯ ಜನತೆ ಅದರ ಕಹಿ ನೆನಪು ಮರೆಯಾಗುವ ಮುಂಚೆಯೇ ಪುನಃ 14 ದಿನಗಳ ಲಾಕ್‍ಡೌನ್‍ಗೆ ಒಳಗಾಗಬೇಕಾಗಿದೆ.
ಅದರಂತೆ ಲಾಕ್‍ಡೌನ್‍ನ ಮೊದಲ ದಿನವಾದ ಇಂದು ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಾದ ದಿನಸಿ ಪದಾರ್ಥಗಳು, ಹಾಲು, ಮೊಸರು ಮತ್ತು ಮೀನು, ಮಾಂಸ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಜನರು ತಮಗೆ ಅಗತ್ಯವಾದ ಸಾಮಾನುಗಳನ್ನು ಖರೀದಿಸಿ ಬೇಗ ಬೇಗನೆ ಮನೆಗೆ ಧಾವಿಸುತ್ತಿದ್ದುದು ಸರ್ವೆ ಸಾಮಾನ್ಯವಾಗಿತ್ತು.
ಈಗಾಗಲೇ ಜವಳಿ ಅಂಗಡಿಗಳು, ಚಿನ್ನ ಬೆಳ್ಳಿ ಅಂಗಡಿಗಳನ್ನು ತೆರೆಯಲು ಅವಕಾಶ ನಿರಾಕರಿಸಿರುವುದರಿಂದ ಕೇವಲ ದಿನಸಿ ಅಂಗಡಿಗಳು ಮಾತ್ರ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಅಂಗಡಿ ಬೀದಿಯಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಕಂಡುಬಂದರು.
10 ಗಂಟೆಯ ನಂತರ ಎಲ್ಲಾ ಅಂಗಡಿಗಳ ಮಾಲೀಕರು ತಾವೇ ಸ್ವತಃ ಬಾಗಿಲು ಹಾಕಿ ಮನೆಕಡೆ ಹೆಜ್ಜೆ ಹಾಕಿದರು. ಆದರೆ ಕೆಲವು ಅಂಗಡಿಗಳವರು ಮಾತ್ರ 10 ಗಂಟೆಯಾದರೂ ವ್ಯಾಪಾರ ವಹಿವಾಟು ನಡೆಸುತ್ತಿದ್ದುದರಿಂದ ಪೋಲೀಸರು ಬಾಗಿಲು ಹಾಕಿಸಿ ಎಚ್ಚರಿಕೆ ನೀಡಿದರು.
ರಸ್ತೆಗಳಲ್ಲಿ ಯಾವುದೇ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸೇರಿದಂತೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಕೇವಲ ಗೂಡ್ಸ್ ವಾಹನಗಳಿಗೆ ಅನುಮತಿ ನೀಡಿದ್ದರೂ ಅವು ಕೂಡ ಮೂರು ಮತ್ತೊಂದು ಎಂಬಂತೆ ಕಾಣಿಸುತ್ತಿತ್ತು. ಇನ್ನೂ ಪ್ರಯಾಣಿಕರಿಲ್ಲದೆ ಇರುವ ಕಾರಣ ಆಟೋ, ಟ್ಯಾಕ್ಸಿಗಳು ಸಹ ರಸ್ತೆಗಿಳಿಯಲಿಲ್ಲ.
ನಗರದ ರಾಷ್ಟ್ರೀಯ ಹೆದ್ದಾರಿ 209 ಹಾದೂ ಹೋಗುವ ಡೀವಿಯೇಷನ್ ರಸ್ತೆ, ಸತ್ತಿ ರಸ್ತೆಗಳಲ್ಲಿ ವಾಹನಗಳ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು. ಜೋಡಿ ರಸ್ತೆಯಲ್ಲಿ ಕೇವಲ ಸರ್ಕಾರಿ ಆಸ್ಪತ್ರೆಯಲ್ಲಿನ ಜನರು ಮಾತ್ರ ಕಂಡು ಬಂದಿರುತ್ತದೆ.
ಅನಗತ್ಯವಾಗಿ ಓಡಾಡುವವರನ್ನು ಪೋಲಿಸರು ತಡೆಗಟ್ಟಿ ವಾಪಸ್ ಕಳುಹಿಸುತ್ತಿದ್ದರು. ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.