ಚಾಕೊಲೇಟ್ ಮಾರುವ ವೃದ್ಧೆ: ವಿಡಿಯೋ ವೈರಲ್

ಮುಂಬೈ, ಸೆ ೯- ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಬಳಿ ಚಾಕೊಲೇಟ್ ಮಾರಿ ಜೀವನ ನಡೆಸುತ್ತಿರುವ ವೃದ್ಧೆಯೊಬ್ಬರು ಇತರರಿಗೂ ಮಾದರಿ ಎನಿಸಿದ್ದಾರೆ.

ವೃದ್ಧ ಮಹಿಳೆಯೊಬ್ಬರು ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಕರ ಬಳಿ ಹೋಗಿ ಆ ಚಾಕೊಲೇಟ್ ಡಬ್ಬಿಗಳನ್ನು ತೋರಿಸಿ ‘ಚಾಕೊಲೇಟ್ ಬೇಕಾ ನಿಮಗೆ’ ಅಂತ ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವೃದ್ದೆಯ ಶ್ರಮಕ್ಕೆ ಫಿದಾ ಆಗಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಆ ವೃದ್ದೆಯ ಉತ್ಸಾಹವನ್ನು ಮೆಚ್ಚುತ್ತಿದ್ದಾರೆ. ಏಕೆಂದರೆ, ವಯಸ್ಸಾಗಿದ್ದರೂ ಸಹ ಆಕೆ ಹೊಟ್ಟೆ ತುಂಬಿಸಿಕೊಳ್ಳಲು ಸ್ವತಃ ದುಡಿದು ತಿನ್ನುತ್ತಿದ್ದಾರೆ. ಅನೇಕ ಜನರು ವಯಸ್ಸಾದ ನಂತರ ತಮ್ಮ ಸಹಾಯಕ್ಕಾಗಿ ಬೇರೆಯೊಬ್ಬರ ಮೇಲೆ ಅವಲಂಬಿತರಾಗುತ್ತಾರೆ. ಆದರೆ ಇವರು ಹಾಗೆ ಮಾಡದೆ, ಅವರೇ ಸ್ವತಃ ದುಡಿಯುತ್ತಿದ್ದಾರೆ ಎಂಬ ಅಂಶ ಅನೇಕರಿಗೆ ಸ್ಪೂರ್ತಿಯಾಗಿದೆ ಎಂದಿದ್ದಾರೆ.

ಈ ವಿಡಿಯೋವನ್ನು ಸ್ವಾತಿ ಮಲಿವಾಲ್ ಅವರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ ಇಂಟರ್‌ನೆಟ್‌ನಲ್ಲಿ ೫,೫೦೦ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.