ಚಾಕೊಲೆಟ್ ಕೊಡಿಸದ್ದಕ್ಕೆ ನೊಂದ ಪತ್ನಿ ಆತ್ಮಹತ್ಯೆ

ಬೆಂಗಳೂರು, ಏ.೭- ಚಿಕ್ಕ ಮಕ್ಕಳು ಚಾಕೋಲೆಟ್ ಚಿಪ್ಸ್ ಸೇರಿದಂತೆ ತಿಂಡಿ ತಿನಿಸುಗಳಿಗೆ ಹಠ ರಂಪಾಟ ಮಾಡುವುದನ್ನು ನೋಡಿದ್ದೇವೆ ಆದರೆ ಎರಡು ಮಕ್ಕಳ ತಾಯಿಯೊಬ್ಬರು, ತನ್ನ ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಬೇಸತ್ತು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಣ್ಣೂರಿನ ನಂದಿನಿ(೩೦) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
೬ ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ.
ನಂದಿನಿ ಪತಿ ಸಲೂಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಅದರಂತೆ ನಿನ್ನೆ ಬೆಳಗ್ಗೆ ೬ಗಂಟೆಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ.
ಆದರೆ, ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದು ಕೊಟ್ಟಿಲ್ಲ. ಅಲ್ಲದೇ ಫೋನ್ ಮಾಡಿದ್ದರೂ ಕರೆ ಸ್ವೀಕರಿಸಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಬಳಿಕ ಪತಿ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಹಾಕಿಕೊಂಡಿದ್ದಳು. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಂದಿನಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.