ಚಾಕು ತೋರಿಸಿ ವಿದ್ಯಾರ್ಥಿಗೆ ಹೆದರಿಸಿ ಮೊಬೈಲ್, ಹಣ ಸುಲಿಗೆ

ಕಲಬುರಗಿ,ಜು.4-ವಿದ್ಯಾರ್ಥಿಯೊಬ್ಬನಿಗೆ ಚಾಕು ತೋರಿಸಿ ಹೆದರಿಸಿ ಆತನ ಬಳಿ ಇದ್ದ ಮೊಬೈಲ್ ಮತ್ತು ಹಣ ದೋಚಿಕೊಂಡು ಹೋದ ಘಟನೆ ನಗರದಲ್ಲಿ ನಡೆದಿದೆ.
ಬಿ.ಎಸ್.ಸಿ.ನರ್ಸಿಂಗ್ ಪದವೀಧರನಾಗಿರುವ ಆಳಂದ ತಾಲ್ಲೂಕಿನ ಹಡಲಗಿ ಗ್ರಾಮದ ಸಿದ್ದರಾಮ ಶ್ಯಾಮರಾವ ಘಂಟೆ (26) ಎಂಬ ವಿದ್ಯಾರ್ಥಿಗೆ ಚಾಕು ತೋರಿಸಿ ಹೆದರಿಸಿ ಮೊಬೈಲ್, ಹಣ ದೋಚಲಾಗಿದೆ.
ವಿದ್ಯಾರ್ಥಿ ಸಿದ್ದರಾಮ ಘಂಟೆ ನಗರದ ಸಿಟಿ ಬಸ್ ಸ್ಟ್ಯಾಂಡ್‍ದಿಂದ ಶಹಾಬಜಾರ ನಾಕಾ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ 20 ರಿಂದ 25 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ಯುವಕರು ಆತನನ್ನು ತಡೆದು ಚಾಕು ತೋರಿಸಿ ಆತನ ಬಳಿ ಇದ್ದ ರೀಯಲ್ ಮೀ ಎಕ್ಸ್ 75 ಜಿ ಮೊಬೈಲ್ ಮತ್ತು 2 ಸಾವಿರ ರೂ.ನಗದು ದೋಚಿದ್ದಾರೆ. ಇದೇ ವೇಳೆ ಅಲ್ಲಿಗೆ ಬಂದ ಇನ್ನೊಬ್ಬ ಯುವಕ ಸೇರಿ ಮೂವರು ಬೈಕ್ ಮೇಲೆ ಪರಾರಿಯಾಗಿದ್ದಾರೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.