ಚಾಕು ಇರಿದು ಯುವಕನ ಕೊಲೆ

ಕಲಬುರಗಿ,ನ.26: ಯುವಕನೊಬ್ಬನಿಗೆ ನಡುರಸ್ತೆಯಲ್ಲೇ ಜನರೆದುರು ಚಾಕುವಿನಿಂದ‌ ಇರಿದು ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪ‌ ಜರುಗಿದೆ.

ಊಡಗಿ ರಸ್ತೆ ನಿವಾಸಿ ಕಿರಣ (21) ಕೊಲೆಗೀಡಾದ ಯುವಕ. ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆಯುತ್ತಲೇ ರಕ್ತಸ್ರಾವದಿಂದ ನರಳುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್​ ಯುವಕ ಅಸುನೀಗಿದ್ದಾನೆ.
ಕೊಲೆ ನಡೆದ ಸ್ಥಳದಲ್ಲಿ ಚೂಪಾದ ಎರಡು ಚಾಕುಗಳು ದೊರೆತಿವೆ. ಘಟನೆಯಿಂದ ಪಟ್ಟಣದ ನಿವಾಸಿಗಳು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಸೋಮಲಿಂಗ ಒಡೆಯರ್​ ಭೇಟಿ ನೀಡಿ ಪರಿಶೀಲಿಸಿದ್ದು, ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.