ಚಾಕು ಇರಿತ : ತಂದೆಯಿಂದಲೇ ಮಗನ ಕೊಲೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ 10 :- ಗಂಡ – ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆಯಂತೆ ಗಂಡ ಹೆಂಡತಿ ನಡುವಿನ ಜಗಳ ಬಿಡಿಸಲು ಹೋದ ಮಗನನ್ನೇ ಕುಡಿದ ಅಮಲಿನಲ್ಲಿ ತಂದೆಯೇ  ಚಾಕುವಿನಿಂದ ಇರಿದು ತೀವ್ರಗಾಯಗೊಳಿಸಿ ಕೊಲೆಗೆ ಕಾರಣವಾಗಿರುವ ಹೃದಯ ವಿದ್ರಾವಕ ಕೃತ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಜರುಗಿದೆ.
ಹುಲಿಕೆರೆ ಗ್ರಾಮದ ರಮೇಶ್ (22) ಕೊಲೆಯಾದ ಮಗನಾಗಿದ್ದು,,  ತಂದೆ ಚಿಚ್ಚಿ ಪಾಲಯ್ಯರ ನಾಗರಾಜ(50) ಕೃತ್ಯ ಎಸಗಿದ ಪ್ರಮುಖ ಆರೋಪಿಯಾಗಿದ್ದು ಈಗ ಪೋಲೀಸರ ಅತಿಥಿಯಾಗಿದ್ದಾನೆ. 
ಹುಲಿಕೆರೆ ನಾಗರಾಜ ಕುಡಿದ ಅಮಲಿನಲ್ಲಿ ತನ್ನ ಹೆಂಡತಿಯ ಮೇಲೆ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದು, ಶನಿವಾರ ರಾತ್ರಿ ಸಹ  ಯಥಾ ರೀತಿ ಜಗಳ ಮಾಡುತ್ತ ಚಾಕುವಿನಿಂದ ಹೆಂಡತಿಯನ್ನು ಕೊಲೆ ಮಾಡಲು ಮುಂದಾದಾಗ  ಮಗ ರಮೇಶನು ಸುಮ್ಮನಿರುವಂತೆ ಹೇಳಲು ಹೋಗಿದ್ದು, ಆಗ ಸಿಟ್ಟಿನಿಂದ ಕೈಯಲ್ಲಿದ್ದ ಚಾಕುವಿನಿಂದ ಕುಡಿದ ಅಮಲಿನಲ್ಲಿ ಮಗನ ಹೊಟ್ಟೆಗೆ ನಾಗರಾಜ ಇರಿದಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಯುವಕನನ್ನು ತಕ್ಷಣ ಜಗಳೂರು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ  ಭಾನುವಾರ ಸಂಜೆ  ರಮೇಶ್ ಕೊನೆಯುಸಿರೆಳೆದಿದ್ದಾನೆ. ಆರೋಪಿ ನಾಗರಾಜನನ್ನು ಹೊಸಹಳ್ಳಿ ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಕುರಿತು ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.