ಚಾಕುವಿನಿಂದ ಇರಿದು ನಿವೃತ್ತ ಪ್ರಾಧ್ಯಾಪಕರ ಹತ್ಯೆ

ಮೈಸೂರು,ಸೆ.21- ನಿವೃತ್ತ ಪ್ರಾಧ್ಯಾಪಕರೋರ್ವರನ್ನು ಅವರ ನಿವಾಸದಲ್ಲೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿರುವ ಘಟನೆ ನಿವೇದಿತಾನಗರದಲ್ಲಿ ನಡೆದಿದೆ.
ನಿವೃತ್ತ ಪ್ರಾಧ್ಯಾಪಕ ಪರಶಿವಮೂರ್ತಿ (67) ಎಂಬವರೇ ಕೊಲೆಯಾದವರು. ಅವರನ್ನು ಅವರ ನಿವಾಸದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಭಾನುವಾರ ರಾತ್ರಿ 7.45ರ ಸುಮಾರಿಗೆ ಕರೆಗಂಟೆ ಒತ್ತಿದ ಇಬ್ಬರು ಹಂತಕರು, ಪರಶಿವಮೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅವರ ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಿಗೆ ಮನಸೋ ಇಚ್ಛೆ ಇರಿದು ಹೊರಟಿದ್ದಾರೆ. ತೀವ್ರ ರಕ್ತಸ್ರಾವದೊಂದಿಗೆ ಮನೆಯ ಹಾಲ್‌ಗೆ ಬಂದ ಇವರು ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇರಿತಕ್ಕೆ ಒಳಗಾದ ತಕ್ಷಣ ಇವರು ಕೂಗಿದ ಶಬ್ದ ಕೇಳಿ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ವೇಳೆ ಇವರೊಬ್ಬರೇ ಮನೆಯಲ್ಲಿದ್ದರು. ಘಟನೆಗೆ ಕಾರಣತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಇಬ್ಬರು ಹಂತಕರು ಬಂದಿರುವುದು ಗೋಚರಿಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್‌ಗೌಡ, ಗೀತಾ ಪ್ರಸನ್ನ, ಎಸಿಪಿಗಳಾದ ಪೂರ್ಣಚಂದ್ರ, ಮರಿಯಪ್ಪ, ಇನ್‌ಸ್ಪೆಕ್ಟರ್‌ಗಳಾದ ವಿಜಯಕುಮಾರ್, ರಾಜು, ಪಿಎಸ್‌ಐ ಭವ್ಯಾ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಘಟನೆಯಿಂದ ಬಡಾವಣೆಯ ಜನರು ಆತಂಕಗೊಂಡಿದ್ದಾರೆ. ಘಟನೆಗೆ ಹಳೆಯ ವೈಷಮ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಪರಶಿವಮೂರ್ತಿಅವರು ಕುವೆಂಪುನಗರದ ಪದವಿಪೂರ್ವ ಕಾಲೇಜು, ಚಳ್ಳೇಕೆರೆ, ನಂಜನಗೂಡು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಹಾಸನದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಇವರು ಪತ್ನಿ ತಮ್ಮ 8 ವರ್ಷದ ದತ್ತುಪುತ್ರನಿಂದ ಪ್ರತ್ಯೇಕವಾಗಿ ವಾಸವಿದ್ದರು. ಪರಶಿವಮೂರ್ತಿ ಬಡ್ಡಿ ವ್ಯವಹಾರ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಸ್ತಿ ವ್ಯವಹಾರದ ಕುರಿತೂ ತಕರಾರುಗಳು ಇದ್ದವು ಎಂದು ಮೂಲಗಳು ತಿಳಿಸಿವೆ.