ಚಾಕಲೇಟ್ ಐಸ್ ಕ್ರೀಮ್ ಮಾಡುವ ವಿಧಾನ

ಐಸ್‌ಕ್ರೀಮ್‌ ಎಂದರೆ ಯಾರಿಗಿಷ್ಟವಿಲ್ಲ ಹೇಳಿ- ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಪ್ರೀತಿ ಗಳಿಸಿದ ಶೀತಲ ತಿನಿಸಿದು. ಬಿರು ಬೇಸಿಗೆಯಲ್ಲಿ ಎಲ್ಲರೂ ಐಸ್ ಕ್ರೀಮ್‌ನ ಮೊರೆ ಹೋಗುವುದು ಸಾಮಾನ್ಯ. ಐಸ್ ಕ್ರೀಂ ಸಾಮಾನ್ಯವಾಗಿ ಹಾಲು ಮತ್ತು ಕೆನೆಯಂತಹ ಕ್ಷೀರೋತ್ಪನ್ನಗಳಿಂದ ತಯಾರಿಸಲಾದ, ಮತ್ತು ಹಲವುವೇಳೆ ಹಣ್ಣುಗಳು ಅಥವಾ ಇತರ ಘಟಕಾಂಶಗಳು ಹಾಗೂ ಪರಿಮಳಗಳೊಂದಿಗೆ ಸಂಯೋಜಿಸಲ್ಪಟ್ಟ ಒಂದು ಶೈತ್ಯೀಕೃತ ಆಹಾರ.

ಬೇಕಾಗುವ ಸಾಮಗ್ರಿಗಳು:
*ಹಾಲು 1 ಲೀಟರ್,
*ಸಕ್ಕರೆ 175 ಗ್ರಾಂ
*ಹಾಲಿನ ಕೆನೆ ಅಥವಾ ಫ್ರೆಶ್ ಕ್ರೀಂ 100ಗ್ರಾಂ
*ಮೆಕ್ಕೆ ಜೋಳದ ಹಿಟ್ಟು 3 ಚಮಚ
*ಗ್ಲೂಕೋಸ್ 1 ಚಮಚ
*ವೆನಿಲಾ ಎಸೆನ್ಸ್ ಅರ್ಧ ಚಮಚ
*ಕೋಕೋ ಪುಡಿ ಎರಡು ಚಮಚ
*ತುರಿದ ಕುಕ್ಕಿಂಗ್ ಚಾಕಲೇಟ್ ನಾಲ್ಕು ಚಮಚ(30ಗ್ರಾಂ)

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಕೋಕೋಪುಡಿ, ಜೋಳದ ಹಿಟ್ಟನ್ನು ಮತ್ತು 1/4 ಲೋಟ ಹಾಲನ್ನು ಹಾಕಿ ಗಂಟುಗಳು ಬಾರದಂತೆ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಪಕ್ಕದಲ್ಲಿಡಿ.
ಸಣ್ಣ ಉರಿಯಲ್ಲಿ ತಳಪಾಯವಿರುವ ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲನ್ನು ಕಡಿಮೆ ಶಾಖದಲ್ಲಿ ಹತ್ತು ನಿಮಿಷ ಕುದಿಸಿ.
ಇದೀಗ ಹಾಲಿಗೆ ಗ್ಲೂಕೋಸ್ ಬೆರೆಸಿಕೊಳ್ಳಿ ಮತ್ತು ಇನ್ನೊಂದು 5 ನಿಮಿಷಗಳ ಕಾಲ ಕುದಿಸಿ ಹಾಗೂ ಒಲೆಯ ಮೇಲಿಂದ ಇಳಿಸಿ ಪೂರ್ತಿ ತಣ್ಣಗಾಗಲು ಬಿಡಿ.
ಹಾಲಿನ ಕೆನೆಯೊಂದಿಗೆ ವೆನಿಲಾ ಎಸೆನ್ಸ್ ಅನ್ನು ಮಿಶ್ರಣ ಮಾಡಿಕೊಳ್ಳಿ
ಇನ್ನು ಈ ಮಿಶ್ರಣ ಎಲ್ಲವನ್ನೂ ಬೇರೆ ಪಾತ್ರೆಗೆ ಹಾಕಿ ಫ್ರಿಡ್ಜ್‪‌ನಲ್ಲಿ ಒಂದು ಗಂಟೆ ಇಡಿ.
ನಂತರ ನೊರೆಯಂತೆ ಮಾಡಿಕೊಳ್ಳಲು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಮೋಲ್ಡ್‌ಗಳಿಗೆ ಇದನ್ನು ಸುರಿಯಿರಿ ಮತ್ತು 2 ಗಂಟೆಗಳ ಕಾಲ ಅದನ್ನು ಫ್ರಿಡ್ಜ್‪‌ನಲ್ಲಿ ಇಡಿ.
ಕುಕ್ಕಿಂಗ್ ಚಾಕಲೇಟನ್ನು ತಯಾರಾದ ಐಸ್ಕ್ರೀಮ್ ಮೇಲೆ ಜೋಡಿಸಿ, ಮತ್ತೆ ಅರ್ಧ ಗಂಟೆ ಫ್ರಿಡ್ಜ್‪‌ನಲ್ಲಿ ಇಟ್ಟು ತೆಗೆಯಿರಿ.
ರುಚಿಕರವಾದ ಚಾಕಲೇಟ್ ಐಸ್ ಕ್ರೀಮ್ ರೆಸಿಪಿ ಸವಿಯಲು ರೆಡಿ!