ಚಾಂದಿನಿ ಬಾರ್ ಉತ್ತಮ ಸಂದೇಶದ ಸಾಮಾಜಿಕ ಚಿತ್ರ

ಮೈಸೂರು: ಏ.25:- ಕೆಲವು ಚಲನ ಚಿತ್ರಗಳ ಹೆಸರುಗಳು ಮೇಲ್ನೋಟಕ್ಕೆ ನೋಡಿದಾಕ್ಷಣ, ಕೇಳಿದಾಕ್ಷಣ, ಇದೇನಪ್ಪಾ ಹೀಗಿವೆ ಅನಿಸಿದರೂ ಸಹ ಕೇವಲ ಸಿನಿಮಾ ಶೀರ್ಷಿಕೆ ಮಾತ್ರದಿಂದ ಆ ಚಿತ್ರದ ಮೌಲ್ಯವನ್ನು ಅಳೆಯಲಾಗದೆಂದೂ ಈ ದಿಸೆಯಲ್ಲಿ “ಚಾಂದಿನಿ ಬಾರ್” ಚಲನಚಿತ್ರವು ಒಂದು ಉತ್ತಮ ಸಂದೇಶ ನೀಡುವ ಸಾಮಾಜಿಕ ಚಿತ್ರವೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲೊಂದಾದ ಮೈಸೂರು ಕನ್ನಡ ವೇದಿಕೆ ವತಿಯಿಂದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ಯೊಡನೆ ಆಯೋಜಿಸಿದ್ದ “ಚಾಂದಿನಿ ಬಾರ್” ಚಿತ್ರತಂಡದ ಅಭಿನಂದನಾ ಕಾರ್ಯಕ್ರಮದಲ್ಲಿ ವರನಟ ಡಾ.ರಾಜಕುಮಾರ್ ಅವರ 95ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಚಿತ್ರದ ಹೆಸರು “ಚಾಂದಿನಿ ಬಾರ್” ಅಂತ ಕೆಟ್ಟದ್ದನ್ನು ಪ್ರತಿನಿಧಿಸುವಂತಿದ್ದರೂ ಕೂಡ ಈ ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿದಾಗ ಕೆಟ್ಟದ್ದರ ಮೂಲಕವೇ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ವಿಶಿಷ್ಟ ಚಿತ್ರವಾಗಿದೆಯೆಂದರು.
ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಮಹಾದಾಸೆ ಹೊತ್ತ ಯುವಕನ್ನೊಬ್ಬ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರಾರಂಭದಲ್ಲಿ ವಿಫಲನಾದರೂ ನಂತರ ಚಾಂದಿನಿ ಬಾರ್ ವೊಂದರಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಾ ಅದೇ ಕೆಟ್ಟ ಜಾಗದಲ್ಲಿ ಸಿಗುವ ಒಳ್ಳೆ ಗೆಳೆಯರನ್ನು ಕೂಡಿಸಿಕೊಂಡು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುತ್ತಾನೆ. ತನ್ನ ಕನಸನ್ನು ನನಸು ಮಾಡಿಕೊಂಡು ಸೋತು ಗೆಲ್ಲುತ್ತಾನೆ. ಗುರಿ ಸಾಧನೆಗೆ ಒಳ್ಳೆಯ ಜಾಗ ಕೆಟ್ಟ ಜಾಗ ಎಂಬುದು ಮುಖ್ಯವಲ್ಲ. ಛಲ, ಬಲ, ಆತ್ಮವಿಶ್ವಾಸ, ಆತ್ಮಸ್ಥೈರ್ಯ ಮಾತ್ರ ಮುಖ್ಯವಾಗಿದ್ದು ಇದನ್ನು ಇಟ್ಟುಕೊಂಡು ಸಾಧಕರು ಸನ್ಮಾರ್ಗದಲ್ಲಿ ನಡೆದದಲ್ಲಿ ಕೆಟ್ಟ ಜಾಗದಲ್ಲೂ ಒಳ್ಳೆಯ ಸಾಧಕರಾಗಿ ಸಮಾಜ ಮೆಚ್ಚುವಂತಹ ಬದುಕನ್ನು ರೂಪಿಸಿಕೊಳ್ಳಬಹುದೆಂಬ ಮಹತ್ವದ ಸಂದೇಶ ನೀಡುವ ಈ ಚಿತ್ರವನ್ನು ಪ್ರತಿಯೊಬ್ಬ ಕನ್ನಡಿಗರೂ ನೋಡಿ ಪೆÇ್ರೀತ್ಸಾಹಿಸಬೇಕು.ಹಾಗೆಯೇ ಚಾಂದಿನಿ ಬಾರ್ ಚಿತ್ರದ ಪಾತ್ರವೊಂದು ಹೇಳುವ “ಕಣ್ಣಿರೋನು ಆಕಾಶದವರೆಗೆ ಮಾತ್ರ ನೋಡುತ್ತಾನೆ. ಕಲ್ಪನೆಯಿರುವವನು ಆಕಾಶದಾಚೆಗೂ ನೋಡುತ್ತಾನೆ”. ಎಂಬ ಸಂಭಾಷಣೆಯ ಹಿನ್ನೆಲೆಯಲ್ಲೇ ಈ ಚಿತ್ರವನ್ನು ನೋಡಿ ಆಸ್ವಾದಿಸಬೇಕೆಂದು ಹೇಳಿದರು.
ಚಾಂದಿನಿ ಬಾರ್ ಚಿತ್ರದ ನಟ ಹಾಗೂ ನಿರ್ದೇಶಕ ರಾಘವೇಂದ್ರ ಕುಮಾರ್, ಕಲಾವಿದರಾದ ಸುಕೃತಿ ಪ್ರಭಾಕರ್, ಸಿದ್ದು ಬದನವಾಳು, ಮಣಿಕಂಠ, ಮಂಜು ಆರ್ಯ, ವಿಜಯ್ ಕಾರ್ತಿಕ್, ಛಾಯಾಗ್ರಹಕ ಎಂ. ಚೇತನ್ ಶರ್ಮ, ಸಂಕಲನಕಾರ ಬಿ.ಎಸ್. ಕೆಂಪರಾಜ್, ಹಿನ್ನೆಲೆ ಸಂಗೀತಗಾರ ರುಕ್ವಿತ್ ಮುರಳಿಧರ್, ವಿಶಾಕ್ ನಾಗಲಾಪುರ ಸೇರಿದಂತೆ ‘ಚಾಂದಿನಿ ಬಾರ್’ ಚಿತ್ರತಂಡವನ್ನು ಮೈಸೂರು ಕನ್ನಡ ವೇದಿಕೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಚಿತ್ರತಂಡದ ಪರವಾಗಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಾಘವೇಂದ್ರ ಕುಮಾರ್ ಅವರು, ಕನ್ನಡ ನಮ್ಮ ಕನ್ನಡ ಚಿತ್ರರಂಗಕ್ಕೊಂದು ಒಳ್ಳೆಯ ಸದಭಿರುಚಿ ಚಿತ್ರವನ್ನು ನೀಡಬೇಕೆಂಬ ಸದುದ್ದೇಶದಿಂದ ಮೈಸೂರಿನವರಾದ ನಾವು ಗೆಳೆಯರೆಲ್ಲ ಸೇರಿಕೊಂಡು ಬಹಳ ಕಷ್ಟಪಟ್ಟು ‘ಚಾಂದಿನಿ ಬಾರ್ ‘ಎಂಬ ಈ ಚಿತ್ರವನ್ನು ನೀಡಿದ್ದೇವೆ. ದಯವಿಟ್ಟು ಎಲ್ಲಾ ಕನ್ನಡಿಗರು ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ನಮ್ಮನ್ನು ಹರಸಿ, ಹಾರೈಸಿ ಪೆÇ್ರೀತ್ಸಾಹಿಸಬೇಕೆಂದು ಕೋರಿಕೊಂಡರು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. “ಶವದ ಮುಂದೆ” ಚಿತ್ರದ ಖ್ಯಾತಿಯ ಚಿತ್ರ ನಿರ್ದೇಶಕ ಸ್ನೇಹಮಯಿ ಕೃಷ್ಣ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಎಲ್‍ಐಸಿ ಸಿದ್ದಪ್ಪ, ನಾಲಾಬೀದಿ ರವಿ, ಗುರುಬಸಪ್ಪ, ಪ್ಯಾಲೇಸ್ ಬಾಬು, ಉತ್ತನಹಳ್ಳಿ ಶಂಕರ್ ಇನ್ನಿತರರಿದ್ದರು.
ಪ್ರಾರಂಭದಲ್ಲಿ ವೇದಿಕೆ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಎಸ್.ಬಾಲಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.