ಚಳ್ಳಕೆರೆ ;ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ

ಚಿತ್ರದುರ್ಗ,ಮೇ.28; ಜಿಲ್ಲೆಯಲಿ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು  ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.
ಚಳ್ಳಕೆರೆ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಸ್ಥರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು. ಮನೆಯಿಂದ ಹೊರಗಡೆ ಹೋಗುವಾಗ ಪ್ರತಿಯೊಬ್ಬರು ಮಾಸ್ಕ್ (ಮುಖಗವಸು) ಧರಿಸಬೇಕು. ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ ಅಂತಹ ಕೋವಿಡ್ ಲಕ್ಷಣಗಳು ಕಂಡು ಬಂದರೆ ಹತ್ತಿರದ ಪ್ರಾಥಮಿಕ  ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಮಾಡಿಸಿಕೊಳ್ಳಬೇಕು. ಕೋವಿಡ್ ಸೋಂಕು ದೃಢಪಟ್ಟರೆ ಮನೆಯಲ್ಲಿ ಚಿಕಿತ್ಸೆ ಪಡೆಯದೇ ಹಾಸ್ಟೆಲ್‍ಗಳಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಹೇಳಿದರು.
ಕೋವಿಡ್‍ಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಕುಟುಂಬದ ಇತರ ಸದಸ್ಯರಿಗೂ ಕೋವಿಡ್ ಸೋಂಕು ಹರಡಲಿದೆ. ಹಾಗಾಗಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕೋವಿಡ್-19 ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಮಾತನಾಡಿ, ಕೋವಿಡ್ ಸೋಂಕಿತರು ತಕ್ಷಣವೇ ಚಿಕಿತ್ಸೆ ಪಡೆಯಬೇಕು ಹಾಗೂ ಕೋವಿಡ್ ಸೋಂಕಿತರ ಸಂಪರ್ಕದಲ್ಲಿರುವವರು ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕು. ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ  ಸಿಇಒ ಇ.ಕೆ.ನಂದಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಉಪಸ್ಥಿತರಿದ್ದರು.