ಚಳ್ಳಕೆರೆ ಬಳಿ ಚಾಲಕ ರಹಿತ ತಪಸ್ ವಿಮಾನ ಪತನ ತಪ್ಪಿದ ಅನಾಹುತ

ಚಿತ್ರದುರ್ಗ,ಆ.೨೦- ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿದ ಡ್ರೋನ್ ಮಾದರಿಯ ಚಾಲಕ ರಹಿತ ತಪಸ್ ವಿಮಾನ ಚಳ್ಳಕೆರೆ ತಾಲೂಕಿನ ವದ್ದಿಕೆರೆ ಗ್ರಾಮದ ರೈತರ ಜಮೀನಿನಲ್ಲಿ ಧರೆಗುರುಳಿ ಪತನಗೊಂಡಿದೆ.
ಚಳ್ಳಕೆರೆಯ ಡಿಆರ್‌ಡಿಒ ಸೆಂಟರ್‌ನಲ್ಲಿ ಅಭಿವೃದ್ಧಿ ಪಡಿಸಿದ ಚಾಲಕ ರಹಿತ ತಪಸ್ ವಿಮಾನ ೦೭ಎ-೧೪ ಪತನಗೊಂಡಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್‌ಡಿಓ ಸಂಸ್ಥೆಯು ಪರಿಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಮಾದರಿ ವಿಮಾನ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಯ ಸಿದ್ದಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಪತನಗೊಂಡಿದ್ದು, ಸುದ್ದಿ ತಿಳಿದ ತಕ್ಷಣವೇ ಡಿಆರ್‌ಡಿಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪತನಗೊಂಡಿರುವ ತಪಸ್ ವಿಮಾನವನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ನಾಯಕನಹಟ್ಟಿ ಬಳಿಯ ಡಿಆರ್‌ಡಿಒ ಘಟಕದಲ್ಲಿ ತಪಸ್ ಲಘು ವಿಮಾನವನ್ನು ತಯಾರಿಸಲಾಗಿದ್ದು, ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಮಾನ ಪತನವಾಗುತ್ತಲೇ ಬೆಂಕಿ ಹೊತ್ತಿಕೊಳ್ಳದ ಕಾರಣ ಯಾವುದೇ ಅಪಾಯ ಎದುರಾಗಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಬಾರಿ ಪತನ:
ಜಿಲ್ಲೆಯಲ್ಲಿ ಡಿಆರ್‌ಡಿಒದ ವಿಮಾನ ಪತನವಾಗುತ್ತಿರುವುದು ಎರಡನೇ ಬಾರಿ ಆಗಿದೆ. ೨೦೧೯ರ ಸೆಪ್ಟೆಂಬರ್‌ನಲ್ಲಿ ಡಿಆರ್‌ಡಿಒದ ರುಸ್ತುಂ ೨ ಮಾನವರಹಿತ ಲಘು ವಿಮಾನ ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ಪತನಗೊಂಡಿತ್ತು.
ಡ್ರೋನ್ ನಿಯಂತ್ರಣ :
ದೇಶಿ ಡ್ರೋನ್ ತಪಸ್ ಹಿರಿಮೆಗೆ ಮತ್ತೊಂದು ಗರಿಯಾಗಿತ್ತು ದೇಶೀಯವಾಗಿ ನಿರ್ಮಿತ ‘ತಪಸ್ ೨೦೧ ಡ್ರೋನ್’ ಹೊಸದೊಂದು ಮೈಲುಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಗಿತ್ತು.
ಸಂಚಾರದ ವೇಳೆ ಡ್ರೋನ್‌ನ ನಿಯಂತ್ರಣವನ್ನು ಭೂಕೇಂದ್ರದಿಂದ ದೂರದ ಐಎನ್‌ಎಸ್ ಸುಭದ್ರ ನೌಕೆಗೆ ಯಶಸ್ವಿಯಾಗಿ ವರ್ಗಾಯಿಸುವ ಪ್ರಕ್ರಿಯೆಯನ್ನು ಕಾರವಾರ ನೌಕಾ ನೆಲೆಯ ಬಳಿ ಯಶಸ್ವಿಯಾಗಿ ನಡೆಸಲಾಗಿತ್ತು.
ಕಳೆದ ಜೂ.೧೬ರಂದು ಚಳ್ಳಕೆರೆಯಲ್ಲಿನ ಡಿಆರ್‌ಡಿಒ ಏರೋನಾಟಿಕಲ್ ಟೆಸ್ಟ್ ರೇಂಜ್‌ನಿಂದ ಬೆಳಗ್ಗೆ ೭.೩೫ಕ್ಕೆ ಹಾರಾಟ ಆರಂಭಿಸಿದ್ದ ತಪಸ್ ಡ್ರೋನ್, ೨೦ ಸಾವಿ?ರ ಅಡಿ ಎತ್ತರದಲ್ಲಿ ೩ ಗಂಟೆ ೩ ನಿಮಿಷ ಹಾರಾಟ ನಡೆಸಿತ್ತು.
ಮೊದಲಿಗೆ ಈ ಡ್ರೋನ್ ನಿಯಂತ್ರಣವನ್ನು ಭೂ ಕೇಂದ್ರದ ಮೂಲಕ ನಿರ್ವಹಿಸಿ ಬಳಿಕ ಕಾರವಾರ ನೌಕಾನೆಲೆಯಿಂದ ೧೪೮ ಕಿ.ಮೀ ದೂರದಲ್ಲಿ ಇದ್ದ ಐಎಸ್‌ಎಸ್ ಸುಭದ್ರ ಯುದ್ಧನೌಕೆಗೆ ವರ್ಗಾಯಿಸಲಾಗಿತ್ತು. ಈ ವೇಳೆ ನೌಕೆಯು ಸುಮಾರು ೪೦ ನಿಮಿಷಗಳ ಕಾಲ ಡ್ರೋನ್ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಈ ಯಶಸ್ವಿ ಪ್ರಯೋಗದ ಬಳಿಕ ಡ್ರೋನ್ ಮರಳಿ ಚಳ್ಳಕೆರೆ ಕೇಂದ್ರಕ್ಕೆ ಬಂದಿಳಿದಿತ್ತು.